ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು. ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವ್ಯತ್ಯಾಸ ಎಂಬ ವಿವೇಕಾನಂದರ ಮಾತುಗಳು ಯುವಜನತೆಗೆ ಎಚ್ಚರಿಕೆಯ ಮಂತ್ರಗಳು ಎಂದು ಯುವಬ್ರಿಗೇಡ್ ಜಿಲ್ಲಾ ಸಂಚಾಲಕ ಎಸ್.ಜಿ.ಅಭಿಲಾಷ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಯುವ ಬ್ರಿಗೇಡ್ ಸಂಘಟನೆಯ ವತಿಯಿಂದ ಆಚರಿಸಿದ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರು ಸ್ವಾಮಿ ವಿವೇಕಾನಂದ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. ಹೇಡಿಗಳು ಹಾಗೂ ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ, ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ ಎಂಬ ವಿವೇಕಾನಂದರ ಆದರ್ಶ ನುಡಿಗಳು ಎಲ್ಲರ ಧ್ಯೇಯಗಳಾಗಲಿ ಎಂದು ನುಡಿದರು.
ಬೆಳಿಗ್ಗೆ ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿಯಿರುವ ಸಲ್ಲಾಪುರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಯುವ ಬ್ರಿಗೇಡ್ ಸದಸ್ಯರು ತಾಲ್ಲೂಕಿನ 14 ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನ ಮತ್ತು ಆದರ್ಶಗಳ ಕುರಿತಂತೆ ವಿವರಿಸಿದರು. ಯುವ ಬ್ರಿಗೇಡ್ ಸದಸ್ಯರಾದ ನರ್ಮದಾ, ಗೋಪಾಲಕೃಷ್ಣ, ಶ್ರೇಯಸ್, ನವೀನ್ ಭಾಷಣಕಾರರಾಗಿ ಆಗಮಿಸಿದ್ದರು.
ಯುವ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮುರಳಿ, ಅಶ್ವತ್ಥ್, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಮಶುಪಾಲ ಆನಂದ್, ನರೇಶ್, ಮಂಜುಕಿರಣ್, ಸ್ವಪ್ನಾ, ಅಮೃತಾ, ಶರತ್, ಮಿಥುನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -