ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಪ್ರಾರಂಭಿಸಿ. ಒಂದನೇ ತರಗತಿಯಿಂದ ಇಂಗ್ಲೀಷ್ ಭಾಷೆಯಾಗಿ ಕಲಿಸಿ. ಕಂಪ್ಯೂಟರ್ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಎಂದು ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ‘ಹಳೆ ವಿದ್ಯಾರ್ಥಿಗಳ ಸಂಘದ ಸಾಧಕರ ಸಮಾಲೋಚನ ಸಭೆ’ಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸಿ ಅವರು ಮಾತನಾಡಿದರು.
ಕ್ರೀಡಾ ತರಬೇತುದರರ ಅಗತ್ಯ ಸರ್ಕಾರಿ ಶಾಲೆಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಕೌಶಲ್ಯ, ತರಬೇತಿ ಸಿಗಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ. ಸರ್ಕಾರಿ ಉದ್ಯೋಗಸ್ಥರು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಬೇಕು ಎಂಬ ಕಾನೂನು ರೂಪಿಸಿ. ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಿತಿಯನ್ನು ಒಗ್ಗೂಡಿಸಿ ಸಮಾನ ಸ್ಥಾನಮಾನಗಳನ್ನು ನೀಡಿದಲ್ಲಿ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಡೆಸ್ಕು, ಟೇಬಲ್, ಚೇರು, ಪುಸ್ತಕಗಳು, ಲೇಖನ ಸಾಮಗ್ರಿ ನೀಡಿದರೆ, ಗ್ರಾಮ ಪಂಚಾಯಿತಿ ವತಿಯಿಂದ ವೇದಿಕೆ, ವಾಲಿಬಾಲ್ ಕೋರ್ಟ್, ಕಬಡ್ಡಿ, ಕೊಕ್ಕೊ, ಶೆಟಲ್ ಕಾಕ್ ಕೋರ್ಟ್, ಶಾಲೆಯ ಆವರಣದಲ್ಲಿ ಸುಮಾರು ಎರಡು ಸಾವಿರ ಗಿಡ ನೆಡಲಾಗಿದೆ. ಶಾಲೆಗೆ ಗೇಟು ಮತ್ತು ಸ್ವಾಗತ ಕಮಾನು, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ವರದಿಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಅವರಿಗೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ಸದಸ್ಯರಾದ ಅಪರ್ಣಾ ಕೊಳ್ಳಾ, ವನಿತಾ ಎನ್ ತೊರವಿ, ಆನಂದ ಬಿ ಲೋಬೋ, ಮರಿಸ್ವಾಮಿ, ಚಂದ್ರಶೇಖರ್ ಅಲ್ಲಿಪೂರ, ಕೆ.ಬಿ.ರೂಪಾ ನಾಯ್ಕ ಹಾಜರಿದ್ದರು.