ಕಾರ್ಪೊರೇಟ್ ಸಂಸ್ಥೆಗಳ ಸಿ.ಇ.ಒ ರೀತಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ದೇಶವನ್ನು ಒತ್ತೆಯಿಡುತ್ತಿದ್ದಾರೆ ಎಂದು ಸಿ.ಪಿ.ಐ.ಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ ಆರೋಪಿಸಿದರು.
ಪಟ್ಟಣದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಸಿ.ಪಿ.ಐ.ಎಂ ಪಕ್ಷದ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮನ್ನು ಆಳುತ್ತಿರುವ ಸರ್ಕಾರಗಳು ತಾವು ನೀಡಿರುವ ಆಶ್ವಾಸನೆಗಳಿಗೆ ತದ್ವಿರುದ್ದವಾಗಿ ನಡೆಯುತ್ತಿವೆ. ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅಸಮರ್ಥತೆಯಿಂದಾಗಿ ದೇಶದ ಆರ್ಥಿಕತೆ ದಿವಾಳಿಯಂಚಿಗೆ ತಲುಪಿತ್ತು. ಈಗ ಹೊಸ ಸರ್ಕಾರ ಬಂದು ಆರು ತಿಂಗಳಾದರೂ ಏನೂ ಬದಲಾವಣೆ ಆಗಿಲ್ಲ. ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದಾರೆ. ಕಂಪೆನಿಗಳ ಲಾಭಕ್ಕಾಗಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಕೂಡ ಮಾಡುತ್ತಿದ್ದಾರೆ. ಇದರ ಪರಿಣಾಮ ಸಾಮಾನ್ಯ ಜನರ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಔಷಧಿ ದರ ನಿಯಂತ್ರಣ ಸರ್ಕಾರದ ಅಧೀನದಲ್ಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಪ್ರವಾಸದ ಸಾಧನೆಯಿದು. ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಿ ಹಾಕಿದ ಒಡಂಬಡಿಕೆಯಿಂದಾಗಿ 80 ಜೀವರಕ್ಷಕ ಔಷಧಿಗಳ ದರ ಹೆಚ್ಚುತ್ತಿವೆ. ಸಾವಿರಾರು ಕೋಟಿ ರೂಗಳು ಚುನಾವಣೆಯ ಸಮಯದಲ್ಲಿ ಖರ್ಚು ಮಾಡಿದ ಅದಾನಿ ಗ್ರೂಪ್ ಕಂಪೆನಿಗೆ ಕೃತಜ್ಞತೆಯ ರೂಪವಾಗಿ ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ಒಪ್ಪಂದ ಮಾಡಿಸಿಕೊಡಲಾಗಿದೆ. ಕಪ್ಪು ಹಣ ವಾಪಸ್ ತರುವುದಾಗಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಗಾಂಧಿಯನ್ನು ಹತ್ಯೆ ಮಾಡಿದ ಜನ ಸ್ವಚ್ಛಭಾರತದ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ದುರಂತವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಲಕ್ವ ಹೊಡೆದಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ಸಿ.ಪಿ.ಐ.ಎಂ ಮತ್ತು ಎಡಪಕ್ಷಗಳ ಆಡಳಿತದಿಂದ ಮಾತ್ರ ಜನಸಾಮಾನ್ಯರಿಗೆ ಅನುಕೂಲ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಹಿಂದೆ ದೇಶದ ಭೂಮಾಲೀಕರು ಹಾಗೂ ಬಂಡವಾಳಶಾಹಿಗಳ ವಿರುದ್ಧ ಹೋರಾಡುವುದೊಂದೇ ಸಿ.ಪಿ.ಐ.ಎಂ ಪಕ್ಷದ ಮುಖ್ಯ ಉದ್ದೇಶವಾಗಿತ್ತು. ಈಗ ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋಮುವಾದಿ ಅಪಾಯವಿದೆ, ಧರ್ಮದ ಹೆಸರಿನಲ್ಲಿ ಶೋಷಣೆ, ಜಾತಿಯ ಹೆಸರಿನಲ್ಲಿ ಶೋಷಣೆ, ಮೂಡನಂಬಿಕೆಗಳ ಮೂಲಕ ಜನಸಾಮಾನ್ಯರ ಶೋಷಣೆ ನಡೆಯುತ್ತಿದೆ. ನೀರಿನ ಸಮಸ್ಯೆಗೆ ಪರಿಹಾರವಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ತುರ್ತಿದೆ. ನಮ್ಮ ಭಾಗದಲ್ಲಿ ಎಲ್ಲಾ ಜನಪ್ರತಿನಿಧಿಗಳೂ ಮತ್ತು ಕೆಲ ಮುಖಂಡರು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಶಾಶ್ವತ ನೀರಾವರಿ ಯೋಜನೆಯ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ನೀರು ತರಲು ಅವರಿಗೆ ಆಸಕ್ತಿಯಿಲ್ಲ ಎಂದು ಲೇವಡಿ ಮಾಡಿದರು.
ಸಿ.ಪಿ.ಐ.ಎಂ ಮುಖಂಡರಾದ ಕೆ.ಎಂ.ವೆಂಕಟೇಶ್, ಲಕ್ಷ್ಮೀದೇವಮ್ಮ, ಮುನಿವೆಂಕಟಪ್ಪ, ಮಳ್ಳೂರು ಶಿವಣ್ಣ, ಕೆ.ಸಿ.ವೆಂಕಟೇಶ್, ಮುನಿಕೃಷ್ಣಪ್ಪ, ಮುನೀಂದ್ರ, ಪಾಪಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -