19.9 C
Sidlaghatta
Sunday, July 20, 2025

ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ “ಸ್ವಸ್ತಿ – ೨೦೧೯” ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ “ಸ್ವಸ್ತಿ – ೨೦೧೯” ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆಯೊಂದಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾಮಾಜಿಕ ಬದ್ಧತೆ, ದೇಶಾಭಿಮಾನ, ಕೌಟುಂಬಿಕೆ ಮೌಲ್ಯಗಳು ಮೊದಲಾದ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಅಂಕ ಗಳಿಕೆಗೆ ಹೇಗೆ ಪ್ರಾಮುಖ್ಯತೆ ನೀಡಬೇಕೋ, ಹಾಗೆಯೇ, ಅದರೊಂದಿಗೆ ಉತ್ತಮ ಸಂಸ್ಕಾರವನ್ನು ಹೊಂದುವುದಕ್ಕೂ ಒತ್ತು ನೀಡಬೇಕು. ಹೃದಯವಂತರಾದವರು, ಮಾನವೀಯ ಗುಣವುಳ್ಳವರು, ಸರ್ವ ಧರ್ಮ ಸಹಿಷ್ಣುಗಳು, ಪರೋಪಕಾರ ಗುಣವುಳ್ಳವರು ಈಗಿನ ಸಮಾಜಕ್ಕೆ ಅತ್ಯಗತ್ಯ. ಮೌಲ್ಯವುಳ್ಳವರು ವೈದ್ಯರಾಗಲಿ, ಎಂಜಿನಿಯರುಗಳಾಗಲಿ, ಕಲೆಕ್ಟರಾಗಲಿ, ಪ್ರಾಧ್ಯಾಪಕರಾಗಲಿ, ಸೈನಿಕರಾಗಲಿ ಹಾಗೂ ವಿವಿಧ ಕ್ಷೇತ್ರಗಳಿಗೆ ಹೋಗುವಂತಾಗಲಿ ಎಂಬ ಅಭಿಲಾಶೆಯಿಂದ ವಿದ್ಯೆಯೊಂದಿಗೆ ಸಂಸ್ಕಾರ ಬೆಳೆಸಲೂ ಆಧ್ಯತೆ ನೀಡುತ್ತಿರುವುದಾಗಿ ಹೇಳಿದರು.
ಪ್ರಾಂಶುಪಾಲ ಮಹದೇವ್ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಮಕ್ಕಳೊಂದಿಗೆ ಪೋಷಕರೂ ಸಹ ಕೆಲವು ತ್ಯಾಗಗಳನ್ನು ಮಾಡಬೇಕಿದೆ. ಮಕ್ಕಳ ಹಾಜರಾತಿ, ನಿಯಮ ಬದ್ಧತೆ, ಪೋಷಕರ ಸಭೆ, ಅಧ್ಯಾಪಕರೊಂದಿಗೆ ಸಮಾಲೋಚನೆ ಮುಂತಾದವುಗಳಲ್ಲಿ ಪೋಷಕರು ತಪ್ಪದೆ ಪಾಲ್ಗೊಳ್ಳಬೇಕು. ಕಟ್ಟಡಕ್ಕೆ ಅತ್ಯಗತ್ಯವಾದ ಪಾಯದ ರೀತಿ ಮಕ್ಕಳ ಜೀವನದಲ್ಲಿ ಪಿಯುಸಿ ಹಂತವು ಸಹ ಬಹು ಮುಖ್ಯ ಘಟ್ಟ. ಬೆಳೆಯುವ ಗಿಡಕ್ಕೆ ಮಣ್ಣು, ನೀರು, ಗೊಬ್ಬರ, ತಡೆ ಬೇಲಿ, ಆಸರೆಯ ಕಡ್ಡಿ ಹೇಗೆ ಅಗತ್ಯವೋ, ಅದೇ ರೀತಿಯಲ್ಲಿ ಪಿಯುಸಿ ಹಂತದ ಮಕ್ಕಳಿಗೆ ಹಲವು ನಿಯಂತ್ರಣಗಳು, ಮಾರ್ಗದರ್ಶನ, ಪ್ರೇರಣೆ, ಮಾಹಿತಿ, ಜ್ಞಾನ ಎಲ್ಲವನ್ನೂ ಒದಗಿಸಲಾಗುತ್ತದೆ ಎಂದು ವಿವರಿಸಿದರು.
ಡಿಡಿಪಿಯು ಸೀತಾರಾಮರೆಡ್ಡಿ ಮಾತನಾಡಿ, ಇಷ್ಟಪಟ್ಟು ಓದಿ, ಕಷ್ಟಪಟ್ಟು ಓದಬೇಡಿ. ಹಂತಹಂತವಾಗಿ ನಿಮ್ಮ ದೌರ್ಬಲ್ಯಗಳನ್ನು ಮೀರುತ್ತಾ ಮೇಲೇರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದಕುಮಾರ್ ಮಾತನಾಡಿ, ಟಿ.ವಿ. ಮತ್ತು ಮೊಬೈಲ್ ನಿಂದ ಮಕ್ಕಳು ಆದಷ್ಟೂ ದೂರವಿರಿ. ಚಂಚಲವಾದ ಮನಸ್ಸನ್ನು ಕೆಟ್ಟ ದಾರಿಯೆಡೆಗೆ ಕರೆದೊಯ್ಯುವ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಪೋಷಕರು ಮೊದಲು ತಿಳಿಯಿರಿ ಮತ್ತು ಮಕ್ಕಳನ್ನು ಅವುಗಳಿಂದ ದೂರವಿರಿಸಿ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಧುಸೂದನ್, ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಕೋರ್ಸುಗಳಿಗೆ ಸೇರಲು ಎದುರಿಸುವ ಪರೀಕ್ಷೆಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ತೋರಿಸಿ ವಿವರಿಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!