ದೇಶದ ಬಡತನ ನಿರ್ಮೂಲನೆ ಸೇರಿದಂತೆ ವಿರೋಧಿಗಳ ಠೀಕೆಗಳನ್ನು ಅಭಿವೃದ್ದಿಯ ಮಂತ್ರವನ್ನಾಗಿಸಿಕೊಂಡು ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿರುವ ನರೇಂದ್ರಮೋದಿ ದೇಶದ ಆಸ್ತಿ ಎಂದು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಹೇಳಿದರು.
ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಮೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಾದಲಿ ಗ್ರಾಮದ ಸಾದಲಮ್ಮ ದೇವಾಲಯದ ಆವರಣದಲ್ಲಿ ಸಾಲುಮರದ ತಿಮ್ಮಕ್ಕನಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗು ಸ್ಥಳೀಯ ರೈತನೊಬ್ಬನಿಗೆ ಜೀವನೋಪಾಯಕ್ಕಾಗಿ ಸೀಮೆ ಹಸು ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಚ್ಚತೆಯನ್ನೇ ದೇವರು ಎಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ನನಸು ಮಾಡಬೇಕು ಎನ್ನುವ ಉದ್ದೇಶದಿಂದ ಸ್ವಚ್ಚಭಾರತ ಅಭಿಯಾನ ದೇಶವನ್ನು ಕಪ್ಪುಹಣದಿಂದ ಮುಕ್ತಗೊಳಿಸಲು ನೋಟ್‍ಬ್ಯಾನ್, ಸೇರಿದಂತೆ ಕ್ಯಾಷ್‍ಲೆಸ್ ವ್ಯವಹಾರಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ದೇಶದಲ್ಲಿ ಉಗ್ರವಾದ, ಬಯೋತ್ಪಾದನೆ ವಿರುದ್ದ ಕೈಗೊಂಡ ಕಠಿಣ ಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದರು.
ದೇಶದ ಸಮಸ್ತ ಜನತೆಯೂ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ. ನಂದೀಶ್ ಮಾತನಾಡಿ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಯೋಜನೆಗಳ ಮೂಲಕ ಯುವಜನತೆಯನ್ನು ಒಟ್ಟುಗೂಡಿಸಿದರೆ ಸ್ತ್ರೀ ಶಕ್ತಿ ಸಂಘಗಳಿಗೆ ಹೆಚ್ಚು ಆಧ್ಯತೆ ನೀಡುವ ಮೂಲಕ ಮಹಿಳೆಯರನ್ನು ಬೆಂಬಲಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದಂತೆ ಜನಧನ್ ಯೋಜನೆಯಡಿ ದೇಶದ ಸಮಸ್ತ ಪ್ರಜೆಗೂ ಬ್ಯಾಂಕ್ ಖಾತೆ ಒದಗಿಸಿದ ಹಾಗು ವರ್ಷಕ್ಕೆ 12 ರೂ ಕಟ್ಟಿದರೆ ವಿಮೆ. ದೇಶದ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಸೈನಿಕರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಮತ್ತಿತರ ಜನಪರ ಯೋಜನೆಗಳಿಂದ ಮೋದಿ ದೇಶದ ಜನತೆಯ ಮನ ಗೆದ್ದಿದ್ದಾರೆ. ಮೋದಿಯವರ ಸಾಧನೆಗಳ ಬಗ್ಗೆ ಮನೆ ಮನೆಗೂ ತೆರಳಿ ಕಾರ್ಯಕರ್ತರು ಮಾಹಿತಿ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಮಾರಂಭದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಸಾಲು ಮರದ ತಿಮ್ಮಕ್ಕನಿಗೆ ಸನ್ಮಾನ ನೆರವೇರಿಸಲಾಯಿತು. ಸ್ಥಳೀಯ ಬಡರೈತ ವೆಂಕಟೇಶ್É ಎಂಬುವವರಿಗೆ ಜೀವನೋಪಾಯಕ್ಕಾಗಿ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೀಮೆ ಹಸುವೊಂದನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ಳಾವಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಧಾಮೋದರ್, ಮಂಜುಳಮ್ಮ, ಸುಜಾತಮ್ಮ, ಅಶ್ವಕ್ ಅಹಮ್ಮದ್, ಬೈರಾರೆಡ್ಡಿ, ಪ್ರತಾಪ್, ಪುರುಷೋತ್ತಮ್, ರವಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -