21.3 C
Sidlaghatta
Wednesday, July 16, 2025

ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

- Advertisement -
- Advertisement -

ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದಲ್ಲಿ ಶುಕ್ರವಾರ ಮಾಘ ಮಾಸದ ಹುಣ್ಣಿಮೆಯ ದಿನ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನಡೆಯಿತು.
ತಹಶೀಲ್ದಾರ್ ಅಜಿತ್‌ಕುಮಾರ್‌ ರೈ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಎಂ.ರಾಜಣ್ಣ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶಿಡ್ಲಘಟ್ಟ ನಗರದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಸಪ್ತ ಬೆಟ್ಟಗಳ ಸಾಲಿನಲ್ಲಿ, ಸಸ್ಯ ಸಂಪತ್ತಿನ ರಾಶಿ ನಡುವೆ ನೆಲೆನಿಂತ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತ ಛಾಪು ಮೂಡಿಸಿದ ವೆಂಕಟರಮಣಸ್ವಾಮಿಯ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದಲೂ ನಾನಾ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದೊಂದು ದಿನವೂ ಒಂದೊಂದು ರೀತಿಯಲ್ಲಿ ದೇವರನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳು ಮತ್ತು ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ದನಗಳಿಗೆ ಹಬ್ಬುತ್ತಿರುವ ಸಾಂಕ್ರಾಮಿಕ ಖಾಯಿಲೆಗಳಿಂದಾಗಿ ಈ ಬಾರಿ ಜಾನುವಾರುಗಳ ಜಾತ್ರೆ ನಡೆಯಲಿಲ್ಲ. ದೇವಾಲಯದ ಸಮಿತಿ ವತಿಯಿಂದ ಭಕ್ತರಿಗೆಲ್ಲ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಹರ್ಷಿ ವಾಲ್ಮೀಕಿಯು ತನ್ನ ಪೂರ್ವಾಶ್ರಮದಲ್ಲಿ ವಾಸಿಸುತ್ತಿದ್ದ ಸ್ಥಳಪುರಾಣವಿದ್ದು, ಅದಕ್ಕೆ ತಳುಕು ಹಾಕಿಕೊಂಡಂತೆ ದೇವಾಲಯದ ಮುಂದೆ ತೆಂಗಿನಕಾಯಿಗಳನ್ನು ಬೆಂಕಿಗೆ ಆಹುತಿ ನೀಡುವ ಸಂಪ್ರದಾಯವಿದೆ. ಆ ಹೊಗೆಯು ದೇವಾಲಯದ ಎತ್ತರಕ್ಕೂ ಆವರಿಸಿತ್ತು.
ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ, ದೇವಾಲಯದ ಅಭಿವೃದ್ಧಿ ಸಮಿತಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ದೇವರ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!