ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮ

0
101

ಕನ್ನಡ ನಾಡು, ನುಡಿ, ಭಾಷೆಯ ಉಳಿಸುವಂತಹ ಮಹತ್ತರ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅರಿಕೆರೆ ಮುನಿರಾಜು ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಕೆರೆ ಗ್ರಾಮದ ಮುನಿರಾಜು ಅವರ ಮನೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪೋಷಕರ ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರೂ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕು. ಮಕ್ಕಳಿಗೆ ಪೋಷಕರಿಂದ ನಾಡಿನ ಹಾಗೂ ಮಾತೃಭಾಷೆಯ ಬಗ್ಗೆ ತಿಳಿಸುವ ಕೆಲಸವಾಗಬೇಕು. ಈ ಹಿಂದೆ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಇದೀಗ ಗ್ರಾಮೀಣ ಪ್ರದೇಶಗಳಿಗೂ ಹರಡಿ ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜು ಮಾತನಾಡಿ, ಕನ್ನಡದ ಕಂಪು ಮನೆಮನಗಳಲ್ಲಿ ಹರಡಬೇಕು. ಈ ನಿಟ್ಟಿನಲ್ಲಿ ಮನೆಯಂಗಳದಲ್ಲಿ ನುಡಿಸಿರಿ ಅಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮನೆಗಳಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಕನ್ನಡದ ಸೊಗಡು ಹರಡುವಲ್ಲಿ ಮತ್ತು ಮನೆಗೆ ಬಂದ ಕನ್ನಡ ಅಭಿಮಾನಿಗಳಿಗೆ ಸತ್ಕರಿಸುವ ಮೂಲಕ ನಮ್ಮ ತಾಲ್ಲೂಕಿನ ಹಲವಾರು ಕುಟುಂಬದವರು ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅರಿಕೆರೆ ಮುನಿರಾಜು ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ನಗರಸಭೆ ಸದಸ್ಯ ನಾರಾಯಣಸ್ವಾಮಿ, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಉಪನ್ಯಾಸಕ ಮುನಿರಾಜು, ಶಿಕ್ಷಕ ನಂಜುಂಡಪ್ಪ, ಗ್ರಾಮಸ್ಥರಾದ ನಾಗರಾಜ್, ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ್, ಆಂಜನೇಯರೆಡ್ಡಿ, ಅಭಿಷೇಕ್, ಪ್ರಭಾಕರ್, ನಾಗೇಶ್, ಚರಣ್, ಶಿವರಾಜ್, ನಂದಕುಮಾರ್, ಜಗದೀಶ್, ಸಂತೋಷ್, ಮುನಿರೆಡ್ಡಿ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!