ಜಗತ್ತಿನ ಉದ್ದಗಲಕ್ಕೂ ಜಾತಿ, ಜನಾಂಗ, ಧರ್ಮ, ಲಿಂಗ, ವರ್ಣ, ಭಾಷೆ ಮತ್ತು ಭೂ ಪ್ರದೇಶಗಳ ಆಧಾರದ ಮೇಲೆ ನಿರಂತರವಾಗಿ ಮಾನವರ ಮೇಲೆ ದೌರ್ಜನ್ಯ ಹಿಂಸೆ, ಬಲತ್ಕಾರ, ಶೋಷಣೆ ನಡೆಯುತ್ತಲೇ ಬಂದಿದೆ. ಇವುಗಳ ವಿರುದ್ಧ ರಕ್ಷಣೆಯನ್ನು ಪಡೆದು ಸುಖಿಯಾಗಿ, ಸ್ವತಂತ್ರವಾಗಿ ಗೌರವಾನ್ವಿತ ಜೀವನವನ್ನು ಬದುಕಲು ಕಂಡುಕೊಂಡ ಪರಿಹಾರವೇ ಮಾನವ ಹಕ್ಕುಗಳು ಎಂದು ಜೆ.ಎಂ.ಎಫ್.ಸಿ.ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಶಿಡ್ಲಘಟ್ಟ, ವಕೀಲರ ಸಂಘ, ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಹಕ್ಕುಗಳು ದಮನವಾಗದಂತೆ ನೋಡಿಕೊಳ್ಳುವ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬದುಕಲು ಅವಕಾಶ ಕಲ್ಪಿಸಬೇಕು. ಆತನ ಗೌರವ, ಪ್ರತಿಷ್ಠೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಮಾನವ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಲಯ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವ ಉದ್ದೇಶದಿಂದ 1948ರಿಂದ ಮಾನವ ಹಕ್ಕುಗಳ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮೂಲ ಸೌಕರ್ಯ ಕಲ್ಪಿಸುವುದು, ಸ್ವಾತಂತ್ರ್ಯ ನೀಡುವುದು ಹಾಗೂ ವ್ಯಕ್ತಿಯ ಬದುಕನ್ನು ಸುಂದರಗೊಳಿಸುವುದೂ ಮಾನವ ಹಕ್ಕುಗಳ ರಕ್ಷಣೆಯಾಗಿದೆ. ಹೆಣ್ಣು ಮಕ್ಕಳಿಗೂ ಸಮಾನವಾದ ಅವಕಾಶಗಳನ್ನು ನೀಡಬೇಕು ಎಂದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಮಾತನಾಡಿ, ಯಾವುದೇ ವ್ಯಕ್ತಿಯನ್ನು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ದಸ್ತಗೀರ್ ಮಾಡಬೇಕಾದಾಗ ಯಾವ ಉದ್ದೇಶದಿಂದ ಮಾಡಲಾಗುತ್ತಿದೆ ಎನ್ನುವ ಕುರಿತು ಮಾಹಿತಿ ನೀಡಬೇಕು. ಅವರ ಕುಟುಂಬದವರಿಗೂ ಮಾಹಿತಿ ನೀಡಬೇಕು ಒಂದು ವೇಳೆ ಮಾಹಿತಿ ನೀಡದೆ ದಸ್ತಗೀರ್ ಮಾಡಿದರೆ ಪ್ರಶ್ನೆ ಮಾಡುವ ಹಕ್ಕು ನಾಗರಿಕರಿಗಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ್ ಗೌಡ ಮಾತನಾಡಿ, ಕಾನೂನಿನಡಿಯಲ್ಲಿ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು. ಭಾರತದ ಸಂವಿಧಾನ ಮೂಲಭೂತ ಹಕ್ಕುಗಳನ್ನು ಕೊಡುವುದಷ್ಟೇ ಅಲ್ಲದೆ ಮೂಲಭೂತ ಕರ್ತವ್ಯ ಗಳನ್ನೂ ವಿಧಿಸುತ್ತದೆ. ಸ್ವಸ್ಥ ಜೀವನಕ್ಕೆ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿರುವುದು ಎಷ್ಟು ಅಗತ್ಯವೋ, ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದಿರಬೇಕಾದುದೂ ಅಷ್ಟೇ ಅಗತ್ಯ.
ಮೂಲಭೂತ ಕರ್ತವ್ಯಗಳ ಉಲ್ಲಂಘನೆಗೆ ಶಿಕ್ಷೆಯನ್ನು ವಿಧಿಸುವ ಯಾವುದೇ ಉಪಬಂಧವನ್ನು ಸಂವಿಧಾನದಲ್ಲಿ ಸೇರಿಸಿಲ್ಲ. ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯಕ್ಕೆ ಮೊರೆಹೋಗಿ ಉಲ್ಲಂಘಿಸದಂತೆ ತಡೆಯಬಹುದು. ಆದರೆ ಮೂಲಭೂತ ಕರ್ತವ್ಯಗಳನ್ನು ಪಾಲಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿಲ್ಲ. ಆದರೆ ‘ಕರ್ತವ್ಯ’ ಎಂಬ ಪದವೇ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂಬುದನ್ನು ಸೂಚಿಸುತ್ತದೆ. ಹಕ್ಕುಗಳನ್ನು ಚಲಾಯಿಸುವ ವ್ಯಕ್ತಿ ಕರ್ತವ್ಯ ಪಾಲನೆಗೂ ಬದ್ಧನಾಗುತ್ತಾನೆ. ತನ್ನ ಕರ್ತವ್ಯಗಳನ್ನು ಪಾಲಿಸದ ವ್ಯಕ್ತಿ ಹಕ್ಕುಗಳನ್ನು ಚಲಾಯಿಸಲು ಯೋಗ್ಯನಾಗುವುದಿಲ್ಲ ಎಂದರು.
ಸಿವಿಲ್ ನ್ಯಾಯಾಧೀಶರಾದ ಸಂದೀಶ್ ಟಿ.ಎಲ್, ಸರ್ಕಾರಿ ಅಭಿಯೋಜಕಿ ಎಸ್.ಕುಮುದಿನಿ, ವಕೀಲ ಮಂಜುನಾಥ್, ಗೀತಾ ಹಾಜರಿದ್ದರು.
- Advertisement -
- Advertisement -
- Advertisement -
- Advertisement -