ತಾಲ್ಲೂಕಿನ ಸುಂಡ್ರಹಳ್ಳಿ ಬಳಿ ಸೋಮವಾರ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ಐಟಿಬಿಪಿ ಫೋರ್ಸ್)ನ ದಕ್ಷಿಣ ಭಾರತ ಕೇಂದ್ರ ಕಚೇರಿಯನ್ನು ಸ್ಥಾಪಿಸುವ ಸಲುವಾಗಿ ಶಂಕುಸ್ಥಾಪನೆಯನ್ನು ನಡೆಸಲಾಯಿತು.
ದೆಹಲಿಯಿಂದ ಆಗಮಿಸಿದ್ದ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ನ ಡಿ.ಜಿ ಕೃಷ್ಣಚೌದರಿ, ಡಿ.ಐ.ಜಿ ಸಂಜೀವ್ ರೈನಾ, ಕಮಾಂಡರ್ ಸಂತೋಷ್ ಪವಾರ್ ನೇತೃತ್ವದಲ್ಲಿ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಲಾಯಿತು.
ಐಟಿಬಿಪಿ ಕ್ಯಾಂಪಸ್ ಸುಂಡ್ರಹಳ್ಳಿ ಎಂಬ ನಾಮಫಲಕದೊಂದಿಗೆ ತಾಲ್ಲೂಕಿನ ಪುಟ್ಟ ಸುಂಡ್ರಹಳ್ಳಿ ಗ್ರಾಮವು ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕಳೆದ ಮಾರ್ಚ್ 5 ರಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಐಟಿಬಿಪಿ ಫೋರ್ಸ್ನ ಟೆಲಿಕಮ್ಯೂನಿಕೇಷನ್ ಮತ್ತು ನಿಸ್ತಂತು ವಿಭಾಗದ ಎಸ್ಐ ಕೆ.ಆರ್.ಶಾಜಿ ಮೋನ್ ಹಾಗೂ ತಂಡದವರಿಗೆ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ವಿಜಯಪುರ-ಕೋಲಾರ ಮಾರ್ಗದಲ್ಲಿ ಬರುವ ಸುಂಡ್ರಹಳ್ಳಿಯ ಸರ್ಕಾರಿ ಜಮೀನು ಸರ್ವೆ ನಂಬರ್ ೧ರ ೨೪ರ ಎಕರೆಯಷ್ಟು ಭೂ ಪ್ರದೇಶವನ್ನು ಐಟಿಬಿಪಿ ಫೋರ್ಸ್ನ ಕ್ಷೇತ್ರೀಯ ಮುಖ್ಯಾಲಯ ಕೇಂದ್ರ ಸ್ಥಾಪನೆಗೆಂದು ಹಸ್ತಾಂತರಿಸಲಾಗಿತ್ತು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿ ನಾಲ್ಕು ರಾಜ್ಯಗಳ ಕೇಂದ್ರಸ್ಥಾನವನ್ನಾಗಿ ಈ ಕ್ಷೇತ್ರೀಯ ಮುಖ್ಯಾಲಯವನ್ನು ಆರಂಭಿಸಲಾಗಿದೆ. ಈ ನಾಲ್ಕೂ ರಾಜ್ಯಗಳಲ್ಲಿನ ಐಟಿಬಿಪಿ ಫೋರ್ಸ್ಗೆ ನೇಮಕ ಪ್ರಕ್ರಿಯೆಗಳು ಇಲ್ಲಿಯೆ ನಡೆಯಲಿವೆ. ಕ್ಷೇತ್ರೀಯ ಮುಖ್ಯಾಲಯ ಕಚೇರಿ, ೨೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಶಾಲೆ ಕಾಲೇಜು ಇನ್ನಿತರೆ ಮೂಲ ಸೌಕರ್ಯಗಳನ್ನು ಈ ಸ್ಥಳದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಸುತ್ತ ಮುತ್ತಲ ಗ್ರಾಮಗಳ ಮಕ್ಕಳಿಗೂ ಈ ಶಾಲೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದಲ್ಲದೆ ಸಾರ್ವಜನಿಕರಿಗೂ ಆಸ್ಪತ್ರೆಯ ಮೂಲಕ ಆರೋಗ್ಯ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಕುಗ್ರಾಮಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯೂ ಐಟಿಬಿಪಿ ಫೋರ್ಸ್ನದ್ದಾಗಿದೆ.
- Advertisement -
- Advertisement -
- Advertisement -
- Advertisement -