ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಬಳಿ ಒಂದು ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿದರು.
ಸ್ವಚ್ಛ ಭಾರತ್ ಯೋಜನೆಯಡಿ ಶಿಡ್ಲಘಟ್ಟ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಯ 17 ಗ್ರಾಮಗಳಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಹೊಸಪೇಟೆ, ಜಂಗಮಕೋಟೆ ಮತ್ತು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಗಳು ಒಳಗೊಂಡು ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು 50 ಲಕ್ಷರೂಗಳ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ. ಇಣ ಕಸ ಹಸಿ ಕಸ ಬೇರ್ಪಡಿಸುವ ತ್ಯಾಜ್ಯ ನಿರ್ವಹಣಾ ಘಟಕದೊಂದಿಗೆ, ಹಸಿ ಕಸದಿಂದ ಗೊಬ್ಬರ ತಯಾರು ಘಟಕದ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಇದು ಆದಾಯದ ಮೂಲವೂ ಆಗಲಿದೆ ಎಂದರು.
ಗ್ರಾಮಗಳಲ್ಲಿಯೂ ಶುಚಿತ್ವ ಕಾಪಾಡಲು ಮತ್ತು ಘನ, ದ್ರವ ತ್ಯಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಗ್ರಾಮೀಣ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಗ್ರಾಮಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜನತೆಗೆ ಅರಿವು ಮೂಡಿಸಲು ಮೊದಲು ಒತ್ತು ನೀಡಲಾಗುತ್ತಿದೆ. ಜನರು ಘನ ಮತ್ತು ದ್ರವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಗ್ರಾಮಗಳಲ್ಲಿ ಉಂಟಾಗುತ್ತಿರುವ ಅನೈರ್ಮಲ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಇದೀಗ ಮೊದಲ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.
ಗ್ರಾಮಗಳ ಮನೆ ಮನೆಯಿಂದಲೇ ಕಸ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮನೆಯಲ್ಲಿ ಕಸ ಹಾಕುವ ಮೊದಲು ಹಸಿ, ಒಣ, ಮರು ಬಳಕೆಯಾಗುವ ಕಸ ಎಂದು ವಿಂಗಡಣೆ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕಸ ಸಾಗಣೆ ವಾಹನಗಳ ಮೂಲಕ ಮನೆಗಳ ಬಳಿಗೆ ಹೋಗಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಿದ್ದಾರೆ. ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಸಲು ಸಹ ಉದ್ದೇಶಿಸಲಾಗಿದೆ. ಈ ಕುರಿತು ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ನಡೆಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಧು, ವಜ್ರೇಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಎಸ್.ಜಿ.ನಾರಾಯಣಸ್ವಾಮಿ, ಗಂಗರೆಡ್ಡಿ, ಯಶೋಧ ನಾರಾಯಣಸ್ವಾಮಿ, ಎಂಜಿನಿಯರ್ ಗೌತಮ್, ಕಂದಾಯ ನಿರೀಕ್ಷಕ ಸುಪ್ರೀತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.