ನಷ್ಟದ ಹಾದಿಯಲ್ಲಿದ್ದ ಬೆಳೆಯಲ್ಲಿ ಲಾಭ ಕಂಡುಕೊಂಡ ರೈತ

0
412

ನಷ್ಟವುಂಟಾಗಿ ನೆಲಕ್ಕೆ ಕುಸಿದರೂ ರೈತರು ಛಲಬಿಡದ ತ್ರಿವಿಕ್ರಮರಂತೆ ಪುನಃ ಮೇಲೇಳುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಹಾಳಾಗಿದ್ದ ಕ್ಯಾಪ್ಸಿಕಮ್ ಬೆಳೆಯನ್ನು ಪುನಃ ನಿರ್ವಹಣೆ ಮಾಡುವ ಮೂಲಕ ತಮ್ಮ ನಷ್ಟವನ್ನು ತುಂಬಿಕೊಂಡು ಲಾಭದತ್ತ ತಾಲ್ಲೂಕಿನ ರೈತರೊಬ್ಬರು ಮುನ್ನಡೆದಿದ್ದಾರೆ.
ತಾಲ್ಲೂಕಿನ ಆನೂರಿನ ದೇವರಾಜು ಅವರು ಲಾಕ್ ಡೌನ್ ಸಮಯದಲ್ಲಿ ಪಾಲಿಹೌಸ್‌ನಲ್ಲಿ ದಪ್ಪಮೆಣಸಿನಕಾಯಿ (ಕ್ಯಾಪ್ಸಿಕಂ) ರೋಗಕ್ಕೆ ತುತ್ತಾದಾಗ ಅದರ ಆಸೆಯನ್ನೇ ಬಿಟ್ಟಿದ್ದರು. ಹಲವಾರು ಮಂದಿ ಆ ಸಮಯದಲ್ಲಿ ಮಾರುಕಟ್ಟೆ ಸಿಗದೇ ಕಷ್ಟಪಡುವುದನ್ನು ಕಂಡು ಬೆಳೆಯನ್ನೇ ತ್ಯಜಿಸುವ ಆಲೋಚನೆಯಲ್ಲಿದ್ದರು. ಆದರೆ, ಸೂಕ್ತ ಮಾರ್ಗದರ್ಶನ ಸಿಕ್ಕ ಅವರು ಜೈವಿಕ ಪೋಷಕಾಂಶಗಳನ್ನು ಭೂಮಿಗೆ ಒದಗಿಸುವ ಮೂಲಕ ಈಗ ಉತ್ತಮ ಬೆಳೆಯನ್ನು ಪಡೆಯುತ್ತಿದ್ದಾರೆ.
ಉತ್ತಮ ಗುಣಮಟ್ಟದ ಹಾಗೂ ಹಲವು ದಿನಗಳ ಕಾಲ ಸಾಗಣೆಯನ್ನೂ ತಾಳಿಕೊಳ್ಳುವ ಗುಣವನ್ನು ಹೊಂದಿರುವ ಈ ದಪ್ಪಮೆಣಸಿನಕಾಯಿ (ಕ್ಯಾಪ್ಸಿಕಂ) ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೂ ರವಾನೆಯಾಗುತ್ತಿದೆ. ಗುಣಮಟ್ಟದ ಕಾಯಿಗಳಿರುವ ಕಾರಣ ವ್ಯಾಪಾರಿಗಳು ಇವರ ತೋಟಕ್ಕೇ ಬಂದು ಅವರೇ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ.
“ಮಾರ್ಚ್ 31 ರಂದು ನಾವು 3,500 ನಾರುಗಳನ್ನು ಹತ್ತು ಗುಂಟೆಯ ಪಾಲಿ ಹೌಸ್ ನಲ್ಲಿ ನಾಟಿ ಮಾಡಿದೆವು. ಬಿಸಿಗೆ ಬಿಂಗಿ ರೋಗಬಂದು ಸುಮಾರು ಆರು ನೂರು ಗಿಡಗಳು ಹಾಳಾದವು. ಉಳಿದದ್ದು ಕೂಡ ಹಾಳಾಗುವ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗ್ರೀನ್ ಪ್ಲಾನೆಟ್ ಜೈವಿಕ ಪೋಷಕಾಂಶಗಳನ್ನು ಕೊಟ್ಟು ಗಿಡಗಳನ್ನು ಕಾಪಾಡಿದೆವು. ಸಾವಯವ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸದೇ ಜೈವಿಕ ಅಂಶಗಳಿಂದ ಬೆಳೆದ ಕ್ಯಾಪ್ಸಿಕಮ್ ತಾಳಿಕೆ ಬಾಳಿಕೆ ಬರುತ್ತದೆ. ಅದಕ್ಕಾಗಿ ದೂರದ ರಾಜ್ಯ ಹಾಗೂ ನೆರೆಯ ದೇಶಕ್ಕೂ ಹೋಗುತ್ತಿದೆ. ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಮ್ ಗೆ ಒಂದು ಕೇಜಿಗೆ ಒಂದು ನೂರು ರೂ ಬೆಲೆಯಿದೆ. ಹಸಿರುಬಣ್ಣದ ಕ್ಯಾಪ್ಸಿಕಮ್ ಗೆ ಎಪ್ಪತ್ತು ರೂ ಬೆಲೆಯಿದೆ. ನಾವು ಹಸಿರುಬಣ್ಣದ ಕಾಯಿಗಳನ್ನೇ ಕಿತ್ತುಕೊಡುತ್ತಿದ್ದೇವೆ” ಎನ್ನುತ್ತಾರೆ ರೈತ ಆನೂರು ದೇವರಾಜು.
“ಇದುವರೆಗೂ ಸುಮಾರು ಎರಡು ಲಕ್ಷ ರೂಗಳನ್ನು ವೆಚ್ಚ ಮಾಡಿದ್ದೇನೆ. ಇದುವರೆಗೂ ಎಂಟು ಬಾರಿ ಕಾಯಿಗಳನ್ನು ಕಟಾವು ಮಾಡಿದ್ದೇವೆ. ವಾರಕ್ಕೊಮ್ಮೆ ಕಟಾವು ಮಾಡುತ್ತಿದ್ದು, ಇನ್ನೂ ಐದಾರು ತಿಂಗಳು ಕಟಾವು ಮಾಡುತ್ತೇವೆ. ಬೆಳೆಯ ಆಸೆಯನ್ನೇ ಬಿಟ್ಟಿದ್ದೆ. ಆದರೆ ಈಗ ಲಾಭದ ಹಾದಿಯಲ್ಲಿದ್ದೇನೆ” ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!