28.1 C
Sidlaghatta
Thursday, February 9, 2023

ಮಂಗಳನ ಅಂಗಳದಲ್ಲಿ ಅವಳಿ ರೊಬಾಟುಗಳು – ಭಾಗ 2

- Advertisement -
- Advertisement -

ಮಂಗಳ ವಾಸಕ್ಕೆ ಯೋಗ್ಯವೆ?
ಮಂಗಳನಲ್ಲಿ ವಾಸ ಯೋಗ್ಯ ವ್ಯವಸ್ಥೆ ಏನಿದೆ ಮೊದಲು ನೋಡೋಣ: ಭೂಮಿಗಿಂತ ಕಡಿಮೆ ಪ್ರಮಾಣದಲ್ಲಾದರೂ ಸರಿ, ಅಲ್ಲಿ ಸೂರ್ಯರಶ್ಮಿ ಬೀಳುತ್ತದೆ, ಬಾಹ್ಯ ವಿಕಿರಣಗಳಿಂದ ಸಾಧಾರಣ ಮಟ್ಟಿಗೆ ರಕ್ಷಣೆ ಕೊಡುವ ವಾಯುಮಂಡಲ ಇದೆ, ಮಾನವದೇಹ ಹೊಂದಿಕೊಳ್ಳುವಷ್ಟು ಅಲ್ಪ ಗುರುತ್ವ ಇದೆ. ತನ್ನ ಅಕ್ಷದಲ್ಲಿ ಹೆಚ್ಚುಕಡಿಮೆ ಭೂಮಿಯಷ್ಟೇ ವೇಗವಾಗಿ ಸುತ್ತು ಹಾಕುವ ಮಂಗಳನಲ್ಲಿ ಹಗಲು ಮತ್ತು ರಾತ್ರಿ ಹೆಚ್ಚೂಕಡಿಮೆ ಭೂಮಿಯಷ್ಟೇ ಇದ್ದು ಮಾನವನ ಜೈವಿಕ ಗಡಿಯಾರಕ್ಕೆ ಏನೂ ತೊಂದರೆಯಾಗದು. ಅಲ್ಲಿಯೂ ನಮ್ಮಲ್ಲಿಯಂತೆ ವರ್ಷಕ್ಕೆ ನಾಲ್ಕು ಋತುಗಳಿವೆ.
ಇನ್ನು, ಇದೊಂದು ದುಸ್ಸಾಹಸವೇ, ಏಕೆಂದರೆ,
* ಮಂಗಳನ ವಾಯುಮಂಡಲ ನೂರಕ್ಕ್ಕೆ ತೊಂಭತ್ತಾರು ಪಾಲು ಇಂಗಾಲದ ಡೈಆಕ್ಸೈಡಿನಿಂದ ತುಂಬಿದೆ. ಉಸಿರಾಡಲು ಸದಾಕಾಲ ಆಕ್ಸಿಜನ್ ವ್ಯವಸ್ಥೆ ಬೇಕೇಬೇಕು. ವಾತಾವರಣ ಭೂಮಿಗಿಂತ ನೂರು ಪಟ್ಟು ತೆಳು ಕೂಡ. ಆದ್ದರಿಂದ ಮೇಲ್ಮೈ ಮೇಲೆ ಬಿದ್ದ ಸೂರ್ಯಶಕ್ತಿಯನ್ನು ಹಿಡಿದಿಡುವ ವ್ಯವಸ್ಥೆ ಮಾನವ ಸ್ನೇಹಿಯಾಗಿಲ್ಲ.
* ಮಂಗಳ ಬರೀ ಒಣ ಮತ್ತು ಬರಡು ನೆಲವಷ್ಟೇ ಅಲ್ಲ, ಸೂರ್ಯನಿಂದ ದೂರವಿರುವುದರಿಂದ ತಣ್ಣಗಿನ ಚೆಂಡೂ ಕೂಡ. ಮಂಗಳ ಅಂಡಾಕಾರದ ಕಕ್ಷೆಯಲ್ಲಿ ತಿರುಗುತ್ತಿರುವುದರಿಂದ ಸೂರ್ಯನಿಂದ ದೂರವಿದ್ದಾಗ ಮತ್ತೂ ತಣ್ಣಗಾಗುತ್ತದೆ. ಬಿರುಬೇಸಿಗೆಯಲ್ಲಿ, ಅದೂ ಸಮಭಾಜಕ ರೇಖೆಯ ಆಜೂಬಾಜು ಹಗಲುಹೊತ್ತು 230 ಸೆಂಟಿಗ್ರೇಡ್ ಮಾತ್ರ ಇರುತ್ತದೆ. ಧ್ರುವಪ್ರದೇಶಗಳಲ್ಲಿ ಬಿರುಚಳಿಗಾಲದಲ್ಲಿ -1250 ಸೆ.ಗೆ ಇಳಿಯುವುದೂ ಉಂಟು! ಸರಾಸರಿ ತಾಪಮಾನ -630 ಸೆಂಟಿಗ್ರೇಡ್ ಎನ್ನಲಾಗುತ್ತಿದೆ.
* ಮಂಗಳನ ದಪ್ಪನೆಯ ನೆಲಹಾಸಿನಡಿ ನೀರಿನ ಸೆಲೆ ಸಿಕ್ಕಿತೆನ್ನಿ, ಅದನ್ನು ಮೇಲೆ ತಂದರೆ ಜತನವಾಗಿ ಕಾಪಾಡಬೇಕಾದೀತು! ಏಕೆಂದರೆ ವಾಯು ಒತ್ತಡ ಇಲ್ಲದಿರುವುದರಿಂದ ಹಾಗೂ ಗುರುತ್ವಾಕರ್ಷಣೆಯೂ ಕೂಡ ಕಡಿಮೆ ಇರುವುದರಿಂದ ಮೇಲೆ ಬಂದ ದ್ರವರೂಪದ ನೀರು ಕ್ಷಣಮಾತ್ರದಲ್ಲಿ ಆವಿಯಾಗಿ ಹಾರಿಹೋಗುತ್ತದೆ!
* ಮಂಗಳನ ವಿರಳ ವಾತಾವರಣದಲ್ಲಿ ಮಾನವ ದೇಹದ ಮೇಲೆ ಬೀಳಬೇಕಾದ ವಾಯುವಿನ ಒತ್ತಡವೂ ಬಹಳ ಕಡಿಮೆ ಇದೆ. ಕನಿಷ್ಟ 700 ಮಿಲಿಬಾರ್‍ನಷ್ಟು ಒತ್ತಡ ನಮಗೆ ಬೇಕೇಬೇಕು. ಮಂಗಳನಲ್ಲಿ ವಾಯುಒತ್ತಡ ಬರೀ 7.5 ಮಿಲಿಬಾರಿದೆ. ಭೂಮಿಯಲ್ಲಿ ಎವರೆಸ್ಟ್ ಏರಿ ಆಮ್ಲಜನಕದ ಚೀಲವಿಲ್ಲದೆ ಕೆಲಕಾಲ ಕಳೆದವರಿದ್ದಾರೆ, ಆದರೆ ಅಲ್ಲೂ ಕೂಡ 300ಮಿಲಿಬಾರಿನ ವಾಯುಒಜ್ಜೆ ಇದ್ದೇ ಇದೆ. ಹಾಗಾಗಿ ಮಂಗಳನಲ್ಲಿ ವಿಶೇಷ ಹಸಿರುಮನೆಯಲ್ಲೇ ವಾಸಿಸಬೇಕು, ಹೊರಗೆ ಬರುವುದಾದಲ್ಲಿ ಒತ್ತಡ ತುಂಬಿದ ವಿಶೇಷ ದಿರಿಸು (ಸ್ಪೇಸ್‍ಸೂಟ್) ಹಾಕಿಕೊಳ್ಳಲೇ ಬೇಕಾಗುತ್ತದೆ. ಅಲ್ಲದೆ ಅಲ್ಲಿಯ ಆಕಾಶದಲ್ಲಿ ಒಝೋನ್ ವಲಯ ಕೂಡ ಇಲ್ಲದಿರುವುದರಿಂದ ಸೂರ್ಯನ ಅತಿನೇರಳೆ ಕಿರಣಗಳು ನೇರವಾಗಿ ದಾಳಿಯಿಡುತ್ತವೆ.
* ಅಂಡಾಕಾರದ ಕಕ್ಷೆಯ ಮಂಗಳ ಸೂರ್ಯನಿಗೆ ಹತ್ತಿರವಾದಾಗ ಒಮ್ಮೊಮ್ಮೆ ಎದ್ದೇಳುವ ದೂಳಿನ ಹೆಗ್ಗಾಳಿ ಇನ್ನೊಂದು ಸಮಸ್ಯೆ. ಇಡೀಗ್ರಹವೂ ಬರಡುಗುಂಡಾದ್ದರಿಂದ ಎದ್ದ ದೂಳು ಕೆಲವು ಸಲ ಅತಿ ವೇಗವಾಗಿ ಹಾಗೂ ಅತಿ ಶೀಘ್ರವಾಗಿ ಎಲ್ಲೆಡೆ ಪಸರಿಸಿಬಿಡುತ್ತದೆ, ದೂಳು ಅಡಗಲು ತಿಂಗಳುಗಟ್ಟಲೆ ಸಮಯ ಬೇಕು. ಭೂಮಿಯ ಮೇಲಾದರೆ, ನೀರಾವಿಯನ್ನು ಹೊತ್ತ ವಾಯುಮಂಡಲ ದೂಳೆದ್ದರೆ ಅದನ್ನು ಹೀರಿಕೊಳ್ಳುತ್ತದೆ. ಮಂಗಳನಲ್ಲಿ ಹಾಗಲ್ಲ, ಮೇಲೆ ಹಾರಿದ ದೂಳಿನ ಕಣಗಳು ಬಿಸಿಲನ್ನು ಹೀರಿ ಇಡೀ ವಾತಾವರಣದ ತಾಪಮಾನವನ್ನೇ ಏರಿಸುತ್ತವೆ. 2001 ರಲ್ಲಿ ಹಾಗೂ 2007 ರಲ್ಲಿ ಮಂಗಳನಲ್ಲಿ ಅಂಥ ದೂಳುಗಾಳಿ ಎದ್ದು ಹರಡಿತ್ತು.
* ಮಂಗಳನಲ್ಲಿ ಹಸಿರಿಲ್ಲ, ಅಂದರೆ ಅಲ್ಲ್ಲಿ ನಮ್ಮ ಹೊಟ್ಟೆಯ ಪಾಡನ್ನು ನಾವೇ ನೋಡಿಕೊಳ್ಳಬೇಕು.
* ಇನ್ನೊಂದು ಅತಿ ಮುಖ್ಯವಾದ ವಿಷಯವೆಂದರೆ, ಮಂಗಳನಿಂದ ಮರಳಿ ಭೂಮಿಗೆ ಬರುವ ತಂತ್ರಜ್ಞಾನ ಇನ್ನೂ ತಯಾರಾಗಿಲ್ಲ!
ಇಷ್ಟಾಗಿಯೂ ಮಂಗಳಯಾನಕ್ಕೆ ಯೋಜನೆ ಹಾಕಿದವರ ತುಸು ವಿವರ ಇಲ್ಲಿದೆ, ನೋಡೋಣ ಬನ್ನಿ:
1. ಇನ್ಸ್‍ಪಿರೇಶನ್ ಮಾರ್ಸ್: ಈ ಸಂಸ್ಥೆ ಲಕ್ಷಾಧೀಶ ಟೆನಿಸ್ ಟಿಟೊ ಅವರದ್ದು, ಈತ 2001 ರಲ್ಲಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆ’ ಗೆ ಹಾರಿಹೋಗಿ 7 ದಿನಗಳ ಕಾಲ ಭೂ ಪ್ರದಕ್ಷಿಣೆ ಹಾಕಿ ಬಂದವನು. 2018ರಲ್ಲಿ ನವದಂಪತಿಯೊಂದಕ್ಕೆ ಮಂಗಳದರ್ಶನ ಮಾಡಿಸುವ ಯೋಜನೆ ಈತನದ್ದು. ಅವರು ಮಂಗಳನಲ್ಲಿ ಇಳಿಯುವುದಿಲ್ಲ, ಮಂಗಳನಿಂದ 160 ಕಿ.ಮೀ. ಎತ್ತರದವರೆಗೆ ಹೋಗಿ ಅಲ್ಲಿಯ ದೃಶ್ಯ ನೋಡಿ ವಾಪಸ್ ಭೂಮಿಗೆ ಬರುತ್ತಾರೆ.
2. ಮಾರ್ಸ್ ಒನ್: ನೆದರ್‍ಲ್ಯಾಂಡಿನ ಸಂಸ್ಥೆ ಇದು. ಕೆಂಪುಗ್ರಹದಲ್ಲಿ 2023 ರಲ್ಲಿ 6 ಶತಕೋಟಿ ಡಾಲರ್ ಬಂಡವಾಳ ಹೂಡಿ ಮೊದಲು ನಾಲ್ವರು ಆಮೇಲೆ ಎರಡು ವರ್ಷಕ್ಕೊಮ್ಮೆ ಇಬ್ಬಿಬ್ಬರ್ರನ್ನು ಕಳಿಸಿ ಮಾನವರ ಕಾಲನಿ ಮಾಡುವ ಇರಾದೆಯ ಈ ಸಂಸ್ಥೆಗೆ ಅವರನ್ನು ಮರಳಿ ಭೂಮಿಗೆ ಕರೆತರುವ ಯೋಚನೆಯೇನೂ ಇಲ್ಲವಂತೆ! ಆದರೂ ಈಗಾಗಲೇ ಮಂಗಳನಲ್ಲಿಗೆ ಹೋಗಲು ಎರಡು ಲಕ್ಷ ಜನರು ಅರ್ಜಿ ಹಾಕಿದ್ದಾರಂತೆ!
3. ಎಲನ್ ಮಸ್ಕ್ ಮಾರ್ಸ್ ಕಾಲನಿ: ಕೋಟ್ಯಾಧೀಶ ಎಲನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ, ಈತನದ್ದು ದ್ರವರೂಪದ ಆಮ್ಲಜನಕ ಮತ್ತು ಮಿಥೇನ್ ತುಂಬಿದ ಮರುಬಳಕೆಯ ರಾಕೆಟ್ಟಿನಲ್ಲಿ ಹತ್ತತ್ತು ಜನರ ಹಾಗೆ ಸುಮಾರು 80 ಸಾವಿರ ಜನರನ್ನು ಮಂಗಳನಲ್ಲಿಗೆ ಕಳಿಸಿ ವಸಾಹತು ಸ್ಥಾಪಿಸಿ ಮಾನವರನ್ನು ಬಹುಗ್ರಹವಾಸಿಗಳನ್ನಾಗಿಸುವ ಯೋಜನೆ. ಒಂದು ಸೀಟಿಗೆ ಬೆಲೆ 5 ಲಕ್ಷ ಡಾಲರ್ ಅಂದರೆ 3 ಕೋಟಿ ರೂ.!
4. ಮಾರ್ಸ್ ಡೈರೆಕ್ಟ್: ಮಾರ್ಸ್ ಸೊಸೈಟಿಯ ಮುಖ್ಯಸ್ಥ, ರಾಬರ್ಟ್ ಝುಬಿನ್ ಅವರ ಕನಸು ಇದು. ಈಗಿರುವ ತಂತ್ರಜ್ಞಾನ ಬಳಸಿ ಗಗನಯಾನಿಗಳು ಮಂಗಳನ ಅಂಗಳದಲ್ಲಿ ಇಳಿದು ಅಲ್ಲಿಯ ವಿರಳ ವಾತಾವರಣದಿಂದ ಆಮ್ಲಜನಕ ಉತ್ಪಾದಿಸಿಕೊಳ್ಳುತ್ತಾರೆ, ನೆಲದಡಿಯ ನೀರು, ಮತ್ತು ಖನಿಜಗಳನ್ನು ಬಳಸಿಕೊಂಡು ನಿರ್ಮಾಣ ಕಾರ್ಯ ಹಾಗೂ ಅಣುಸ್ಥಾವರ ಕಟ್ಟಿ ವಿದ್ಯುತ್ ಪಡೆಯುತ್ತ್ತ ಮುಂದಿನ ದಿನಗಳಲ್ಲಿ ಅಲ್ಲಿಯೇ ಸುಸ್ಥಿರ, ಸ್ವಸ್ಥಿರ ಬದುಕು ಕಟ್ಟಿಕೊಳ್ಳಬಹುದು, ಭೂಮಿಯ ಅವಲಂಬನೆಯನ್ನು ಕಡಿಮೆಗೊಳಿಸಬಹುದು.
5. ನಾಸಾ: ಮಾನವಸಹಿತ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳಿಸಬೇಕೆನ್ನುವುದು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ನಾಸಾ ಸಂಸ್ಥೆಯ ಬಹುದಿನಗಳ ಯೋಜನೆ. 2025 ಒಳಗೆ ಭೂಸಮೀಪದ ಕ್ಷುದ್ರಗ್ರಹಕ್ಕೆ ಮಾನವ ಸಹಿತ ನೌಕೆಯ ರವಾನೆ, ಆನಂತರ 2030 ರೊಳಗೆ ಮಂಗಳನಲ್ಲಿಗೆ ಮಾನವ ಎಂದು ನಾಸಾ ಗುರಿ ಹೊಂದಿದೆ.
ಮುಗಿಯಿತು.
– ಸರೋಜಾ ಪ್ರಕಾಶ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!