ಐಕ್ಯತೆ ಹಾಗೂ ಸೌಹಾರ್ಧತೆಯ ಧ್ಯೋತಕವಾಗಿ ಟಿಪ್ಪುಸುಲ್ತಾನ್ ಜಯಂತ್ಯುತ್ಸವವನ್ನು ಆಚರಿಸುವಂತೆ ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ನಗರಸಭೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಟಿಪ್ಪುಸುಲ್ತಾನ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅನೇಕ ಸಾಮಂತರು, ರಾಜರು ಬ್ರಿಟಿಷರೊಂದಿಗೆ ಕೈ ಜೋಡಿಸಿ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ಧ ತಿರುಗಿ ಬಿದ್ದವರು ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನ್. ಹಿಂದೂ- ಮುಸ್ಲಿಮರ ನಡುವೆ ಒಡಕನ್ನು ಮೂಡಿಸಿ ಲಾಭ ಪಡೆಯಲು ಬ್ರಿಟಿಷರು ಯತ್ನಿಸುತ್ತಿದ್ದಾಗ ಟಿಪ್ಪು ಹಿಂದೂ-ಮುಸ್ಲಿಮರ ನಡುವೆ ಐಕ್ಯತೆ, ಸದ್ಭಾವನೆಯನ್ನು ಬೆರೆಸಲು ಪ್ರಯತ್ನ ಪಡುತ್ತಿದ್ದರು. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹಿಂದೂ -ಮುಸ್ಲಿಮರು ಒಂದಾಗಬೇಕು. ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುವ ದುಷ್ಟಶಕ್ತಿಗಳನ್ನು ತಿರಸ್ಕರಿಸಬೇಕು. ಈ ಸಂಬಂಧ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಮೊಹಮ್ಮದ್ ಖಾಸೀಂ ಮಾತನಾಡಿ, ಈ ಭಾಗದ ರೈತರ ಜೀವನಾಡಿಯಾಗಿರುವ ರೇಷ್ಮೆ ಬೆಳೆಯನ್ನು ಮೊಟ್ಟಮೊದಲು ನಮ್ಮ ಭಾಗಕ್ಕೆ ಪರಿಚಯಿಸಿದ್ದು ಟಿಪ್ಪುಸುಲ್ತಾನ್ ಹಾಗಾಗಿ ಈ ಭಾಗದ ಜನ ಅವರನ್ನು ಸದಾ ಸ್ಮರಿಸಬೇಕು. ದೇಶಕ್ಕೋಸ್ಕರ ತಮ್ಮ ಸ್ವಂತ ಮಕ್ಕಳನ್ನು ಒತ್ತೆಯಿಟ್ಟು ಸಾಯುವ ತನಕ ಹೋರಾಡಿ ಹುತಾತ್ಮರಾದರು. ಮೊಟ್ಟಮೊದಲು ಯುದ್ಧದಲ್ಲಿ ಕ್ಷಿಪಣಿಯ ಪ್ರಯೋಗಿಸಿದ್ದ ಎಂಬ ಕಾರಣಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯವರು ಟಿಪ್ಪುವಿನ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರದಲ್ಲಿ ಅಲ್ಪಸಂಖ್ಯಾತರ ಕಾರ್ಯಕ್ರಮ ನಡೆಸಲು ಟಿಪ್ಪು ಭವನವೊಂದನ್ನು ನಿರ್ಮಿಸಬೇಕು ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಟಿಪ್ಪು ವಸತಿ ಶಾಲೆಯನ್ನು ಮಂಜೂರು ಮಾಡಿಸುವಂತೆ ಕೋರಿ ಟಿಪ್ಪುಸುಲ್ತಾನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮನವಿಪತ್ರವನ್ನು ಸಲ್ಲಿಸಿದರು.
ವಕೀಲರಾದ ನೌಷಾದ್, ಯಾಸ್ಮೀನ್ ತಾಜ್, ಸರ್ಕಾರಿ ಆಸ್ಪತ್ರೆಯ ಅಧಿಕಾರಿ ಸಮೀವುಲ್ಲಾ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಮುಸ್ಲೀಂ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಉರ್ದು ಪೌಢಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಟಿಪ್ಪುಸುಲ್ತಾನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಶಾಸಕ ಎಂ.ರಾಜಣ್ಣ ಅವರಿಗೆ ಕತ್ತಿಯನ್ನು ನೀಡಿ ಮೈಸೂರು ಪೇಟವನ್ನಿಟ್ಟು ಗೌರವಿಸಲಾಯಿತು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಗರಸಭೆ ಆಯುಕ್ತ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಟಿಪ್ಪುಸುಲ್ತಾನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಿ.ರೆಹಮಾನ್, ರಹಮತ್ತುಲ್ಲ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ನಗರಸಭೆ ಸದಸ್ಯ ಅಫ್ಸರ್ಪಾಷ, ಸಿಕಂದರ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮೌಲಾ, ರಾಜ್ಯ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಹ್ಮದ್ ಹುಸೇನ್, ನಜೀರ್ಸಾಬ್, ಬಂಕ್ ಮುನಿಯಪ್ಪ, ದೊಣ್ಣಹಳ್ಳಿ ರಾಮಣ್ಣ, ಸಾದಿಕ್, ಬುರುಡುಗುಂಟೆ ಬಷೀರ್, ಅಫ್ಜಲ್ ಪಾಷ, ಜಾಮಿಯಾ ಮತ್ತು ಮದೀನಾ ಮಸೀದಿಯ ಧರ್ಮಗುರುಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -