ರೇಷ್ಮೆ ನಮ್ಮ ತಾಲ್ಲೂಕಿಗೆ ಒಂದು ರೀತಿಯಲ್ಲಿ ವರದಾನವಾದರೆ ಅದರಿಂದ ಬರುವ ಖಾಯಿಲೆಗಳಾದ ಆಸ್ತಮಾ ಮತ್ತು ಕ್ಷಯ ರೋಗ ಶಾಪವಾಗಿದೆ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
ನಗರದ ಸಿದ್ಧಾರ್ಥನಗರದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಿಂದ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವಾದ ‘ಸಕ್ರಿಯ ಟಿ ಬಿ ಪ್ರಕರಣಗಳನ್ನು ಪತ್ತೆ ಹಚ್ಚಲು ಮನೆ ಮನೆ ಭೇಟಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ರೋಗ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ರೋಗಿಗಳ ಮನೆಗೆ ಹೋಗಿ ಸೂಕ್ತ ಔಷಧಿ ನೀಡುವ ಕಾರ್ಯ ಪ್ರಾರಂಭವಾಗಿದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ರೋಗಿಗೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಆರಂಭಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಕ್ಷಯ ರೋಗ ಚಿಕಿತ್ಸಾ ಘಟಕದ ಹಿರಿಯ ಮೇಲ್ವಿಚಾರಕ ಎನ್. ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 45 ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದೇವೆ. ಸುಮಾರು 27,774 ಮಂದಿಯನ್ನು ನಾವು ಪರೀಕ್ಷೆ ಮಾಡಿ ಅವರಲ್ಲಿ ಕ್ಷಯ ರೋಗವಿರುವವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ. ರೋಗವು ಉಲ್ಭಣವಾಗದಂತೆ ಕೊನೆಗೆ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ, ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಔಷಧಿ ಸೇವನೆಯಿಂದ ಕ್ಷಯ ರೋಗದ ಲಕ್ಷಣಗಳೆಲ್ಲ ಮಂಗಮಾಯವಾಗಿ ಬಿಡುತ್ತವೆ. ಆದರೆ ಈ ಹಂತದಲ್ಲಿ ಔಷಧಿಯನ್ನು ನಿಲ್ಲಿಸಬಾರದು. ಹೀಗೆ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿ, ಔಷಧಿಯನ್ನು ಉಪೇಕ್ಷಿಸುವ ರೋಗಿಗಳಲ್ಲಿ ರೋಗ ಬಲಿಯುತ್ತಾ ಹೋಗುತ್ತದೆ. ಅದರಿಂದ ರೋಗಾಣುಗಳು ಔಷಧಿಗೆ ಹೊಂದಿಕೊಂಡು ಬದುಕುವ ಸಾಮರ್ಥ್ಯ ಗಳಿಸುತ್ತವೆ. ಸಾಮಾನ್ಯ ಕ್ಷಯವು ಬಹುವಿಧ ಔಷಧ ನಿರೋಧಕ ಕ್ಷಯವಾಗಿ ಮಾರ್ಪಟ್ಟು ಗಂಡಾಂತರ ಸ್ಥಿತಿಗೆ ತಲುಪಬಹುದು. ಪ್ರತಿಯೊಬ್ಬ ಕ್ಷಯ ರೋಗಿಯು ಪಕ್ಕಾ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆದರೆ ರೋಗ ಅಷ್ಟೇ ಪಕ್ಕಾ ವಾಸಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನುಡಿದರು.
ನಗರಸಭೆ ಆಯುಕ್ತ ಚಲಪತಿ, ಸದಸ್ಯೆ ಸುಮಿತ್ರಾ ರಮೇಶ್, ಡಾ.ವಿಜಯ್, ಸಿ.ಮುನಿರತ್ನಮ್ಮ, ಎನ್. ಗಂಗಾಧರಯ್ಯ ಹಾಜರಿದ್ದರು.
- Advertisement -
- Advertisement -
- Advertisement -