ಒಂದೆಡೆ ಪೌರಕಾರ್ಮಿಕರು ಆರು ತಿಂಗಳುಗಳಿಂದ ಸಂಬಳ ಬಂದಿಲ್ಲ ಎಂದು ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಯಾರ ಅರಿವಿಗೂ ಬರದಂತೆ ಕೆಲಸಕ್ಕೆ ಹಾಜರಾಗದ ಪೌರಕಾರ್ಮಿಕರ ಹೆಸರಿನಲ್ಲಿ ಸುಮಾರು ಎರಡು ಲಕ್ಷ ರೂಗಳಷ್ಟು ಸಂಬಳವನ್ನು ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ೧೯ ವರ್ಷಗಳಿಂದ ಕೆಲಸಕ್ಕೆ ಹಾಜರಾಗದೇ ಇದ್ದರೂ ಪೌರಕಾರ್ಮಿಕರೊಬ್ಬರ ಹೆಸರಿನಲ್ಲಿ ಸಂಬಳ ಡ್ರಾ ಮಾಡಿ ಲಕ್ಷಾಂತರ ರೂ ಸರ್ಕಾರಿ ಹಣ ದುರುಪಯೋಗವಾಗುವಲ್ಲಿ ನಗರಸಭೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ನಗರಸಭೆಯ ಕೆಲ ಸದಸ್ಯರು ದೂರಿದ್ದಾರೆ.
ನಗರಸಭೆಯ ಪೌರಕಾರ್ಮಿಕರಾದ ಸುಭದ್ರಾಬಾಯಿ ಎನ್ನುವವರು ೧೯೯೬ ರಿಂದ ಈವರೆಗೂ ಒಂದೇ ಒಂದು ದಿನ ಕೆಲಸ ಮಾಡಿಲ್ಲ. ಹಾಗಿದ್ದರೂ ಕಳೆದ ಹತ್ತೊಂಬತ್ತು ವರ್ಷಗಳಿಂದ ಆಕೆಯ ಹೆಸರಿಗೆ ಸಂಬಳದ ಚೆಕ್ ನೀಡಲಾಗುತ್ತಿದೆ. ಬ್ಯಾಂಕಿನಲ್ಲಿ ಸಂಬಳ ಡ್ರಾ ಆಗುತ್ತಿದ್ದಂತೆ ನಗರಸಭೆಯ ಕೆಲ ಅಧಿಕಾರಿಗಳು ಅದರಲ್ಲಿ ಆಕೆಗೊಂದಿಷ್ಟು ಹಣ ನೀಡಿ ಉಳಿದ ಹಣ ತಾವು ಹಂಚಿಕೊಳ್ಳುವ ಕಾಯಕ ಮಾಡುತ್ತಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ.
ಪ್ರತಿನಿತ್ಯ ನಗರವನ್ನೆಲ್ಲಾ ಸ್ವಚ್ಚಗೊಳಿಸುವ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಲು ನಗರಸಭೆಯಲ್ಲಿ ಹಣವಿಲ್ಲ ಎನ್ನುವ ಅಧಿಕಾರಿಗಳು ಕಳೆದ ನವೆಂಬರ್ ೨೭ ರಂದು ಸುಭದ್ರಾಭಾಯಿಯವರಿಗೆ ಒಂದು ವರ್ಷದ ಸಂಬಳದ ಬಾಬ್ತು ೨,೦೭,೯೨೦ ರೂ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿಸಿರುವ ಅಧಿಕಾರಿಗಳು ಆಕೆಗೆ ಕೇವಲ ೭೦ ಸಾವಿರ ಮಾತ್ರ ನೀಡಿ ಉಳಿದ ಹಣವನ್ನು ತಾವೇ ಹಂಚಿಕೊಂಡಿದ್ದಾರೆ.
ತಿಂಗಳಿಗೆ ೨೦ ಸಾವಿರದಂತೆ ಸುಮಾರು ೧೯ ವರ್ಷಗಳ ಕಾಲ ಕೆಲಸ ಮಾಡದಿರುವ ಪೌರಕಾರ್ಮಿಕರೊಬ್ಬರಿಗೆ ಸಂಬಳ ನೀಡಿರುವ ನಗರಸಭೆ ಅಧಿಕಾರಿಗಳು ಸುಮಾರು ೪೫ ಲಕ್ಷ ರೂಪಾಯಿಗಳಿಗೂ ಹೆಚ್ಚು ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಎಂ.ಕೇಶವಮೂರ್ತಿ, ಸದಸ್ಯರಾದ ಎಸ್.ರಾಘವೇಂದ್ರ, ಲಕ್ಷ್ಮಯ್ಯ, ಶಫೀ, ಸಿಕಂದರ್, ಮುಖಂಡರಾದ ತನ್ವೀರ್ಪಾಷ, ಶ್ರೀನಾಥ್, ಶ್ರೀಧರ್, ಮಂಜುನಾಥ್, ಸಾಧಿಕ್ ಮತ್ತಿತರರು ನಗರಸಭೆ ಆಯುಕ್ತರ ಕೋಣೆಗೆ ತೆರಳಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
‘ಶಿಡ್ಲಘಟ್ಟ ನಗರಸಭೆಗೆ ಆಯುಕ್ತರಾಗಿ ನಾನು ಬಂದು ಕೇವಲ ಎರಡು ತಿಂಗಳಷ್ಟೇ ಆಗಿದ್ದು ಪ್ರಭಾರಿಯಾಗಿ ಚಿಂತಾವಣಿ ನಗರಸಭೆಯ ಉಸ್ತುವಾರಿಯಿದ್ದುದರಿಂದ ಶಿಡ್ಲಘಟ್ಟ ನಗರಸಭೆ ಕಚೇರಿಯಲ್ಲಿ ಸಮಸ್ಯೆಗಳೇನಿವೆ ಎಂಬುದು ಇನ್ನೂ ಅಷ್ಟಾಗಿ ತಿಳಿದಿಲ್ಲ. ಕೆಲಸಕ್ಕೆ ಬಾರದೇ ಸಂಬಳ ಡ್ರಾ ಆಗಿರುವುದು ಇದೇ ಮೊದಲೇನಲ್ಲ ಈ ಹಿಂದಿನಿಂದಲೂ ಆಗಿದೆ. ನಮ್ಮ ಕಚೇರಿಯ ಪರಿಸರ ಅಭಿಯಂತರರು ಸೇರಿದಂತೆ ಆರೋಗ್ಯ ನಿರೀಕ್ಷಕರು ನೀಡಿರುವ ವರದಿಯನ್ವಯ ಹಾಗು ಕೆಸಿಎಸ್ಆರ್ ನಿಯಮದಡಿ ಸಂಬಳ ಪಾವತಿಸುವಂತೆ ಸೂಚಿಸಿದ್ದು ಸಂಬಳ ಆಕೆಯ ಬ್ಯಾಂಕ್ ಖಾತೆಯಲ್ಲಿ ಜಮೆಯಾಗಿದೆ. ಇನ್ನು ಆಕೆಗೆ ಸ್ವಲ್ಪ ಹಣ ನೀಡಿ ಇನ್ನುಳಿದ ಹಣವನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂಬ ಸದಸ್ಯರ ದೂರಿನ ಬಗ್ಗೆ ಸುಭದ್ರಾಬಾಯಿಯಿಂದ ಲಿಖಿತವಾಗಿ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು. ಸಂಬಳ ನೀಡುವಲ್ಲಿ ಅವ್ಯವಹಾರವಾಗಿರುವುದು ಸಾಬೀತಾದಲ್ಲಿ ಯಾವುದೇ ಮುಲಾಜಿಲ್ಲದೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ನಗರಸಭೆ ಆಯುಕ್ತ ಎಚ್.ವಿ.ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರಕಾರ್ಮಿಕರು ನಗರಸಭೆ ಮುಂಭಾಗದಲ್ಲಿ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆ ಕೂಡ ನಡೆಯಿತು.
- Advertisement -
- Advertisement -
- Advertisement -
- Advertisement -