ಸಮಾಜದ ತಪ್ಪು ಒಪ್ಪುಗಳನ್ನು ಪ್ರಚುರಪಡಿಸುವ ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಪ್ರಗತಿಯಾದಂತೆ ಪತ್ರಕರ್ತರ ಕಾರ್ಯಶೈಲಿಯೂ ಬದಲಾಗಿದೆ ಹಾಗೂ ಸವಾಲುಗಳೂ ಹೆಚ್ಚಿವೆ. ಜನಸಾಮಾನ್ಯರ ಕಷ್ಟ, ನೋವು, ತೊಂದರೆಗಳಿಗೆ ಪತ್ರಕರ್ತರು ಧ್ವನಿಯಾಗಬೇಕು. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ತಪ್ಪುಗಳನ್ನು ತೋರಿಸಿ ತಿದ್ದುವ ಕೆಲಸದ ಜೊತೆಯಲ್ಲಿ ಸಾಮಾಜಿಕ ಕಳಕಳಿ ಮತ್ತು ಎಲೆಮರೆ ಕಾಯಿಯಂಥಹ ಪ್ರತಿಭೆಗಳು ಹಾಗೂ ಉತ್ತಮ ಕಾರ್ಯಗಳ ಬಗ್ಗೆಯೂ ಬೆಳಕು ಚೆಲ್ಲಬೇಕು. ಪತ್ರಕರ್ತರು ವಸ್ತುನಿಷ್ಠ ಪತ್ರಿಕೋದ್ಯಮವನ್ನು ಅನುಸರಿಸಿ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್ ಮಾತನಾಡಿ, ದೃಶ್ಯ ಮಾಧ್ಯಮದ ಹೆಚ್ಚಳದಿಂದಾಗಿ ಸುದ್ಧಿಯ ವೇಗ ಹೆಚ್ಚಿದ್ದು ಪತ್ರಕರ್ತರಿಗೆ ಸವಾಲಾಗಿ ಪರಿಣಮಿಸಿದೆ. ಸುದ್ಧಿಯನ್ನು ಪುನರ್ಪರಿಶೀಲಿಸಲು ಅತ್ಯಂತ ಕಡಿಮೆ ಸಮಯವಿರುವುದರಿಂದ ಅಚಾತುರ್ಯವಾಗದಂತೆ ಪತ್ರಕರ್ತರು ಸದಾ ಜಾಗರೂಕರಾಗಿರಬೇಕು. ಸ್ವಹಿತಕ್ಕಿಂತ ಸಮಾಜಮುಖಿಗಳಾಗಿ ದುಡಿಯುವ ಉತ್ತಮ ಪತ್ರಕರ್ತರಿಗೆ ಗೌರವ ಸದಾ ಇರುತ್ತದೆ. ಜಿಲ್ಲಾ ಸಂಘದ ವತಿಯಿಂದ ಜೀವವಿಮಾ ಮಾಡಿಸಲಾಗಿದೆ. ಕಾರ್ಯನಿರತ ಪತ್ರಕರ್ತರು ನಿಧನರಾದರೆ ಜಿಲ್ಲಾ ಸಂಘದಿಂದ 50 ಸಾವಿರ ರೂಗಳನ್ನು ನೀಡುತ್ತೇವೆ. ಗ್ರಾಮೀಣ ಪತ್ರಕರ್ತರು ನಿಜವಾಗಿಯೂ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕಾರ್ಯನಿರತ ಪತ್ರಕರ್ತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನೂ ತಲುಪಿಸಲು ಜಿಲ್ಲಾ ಸಂಘ ಶ್ರಮಿಸಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾನಪದ ಕಲಾವಿದರಿಂದ ಗೀತಗಾಯನವನ್ನು ಆಯೋಜಿಸಲಾಗಿತ್ತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ರಾಧಾಕೃಷ್ಣ, ರಾಜ್ಯ ಸಮಿತಿ ಸದಸ್ಯ ಸೋ.ಸು. ನಾಗೇಂದ್ರನಾಥ್, ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ರೈತ ಮುಖಂಡರಾದ ಮಳ್ಳೂರು ಹರೀಶ್, ಭಕ್ತರಹಳ್ಳಿ ಬೈರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಶೇಖರ್, ಖಜಾಂಚಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -