ಬಡ್ಡಿ ಮನ್ನಾ ಹಾಗೂ ಸಾಲ ಮನ್ನಾಗಳನ್ನು ಸರ್ಕಾರಗಳು ಮಾಡದೇ ಆ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಬಳಸಿದಲ್ಲಿ ರೈತರ ಆರ್ಥಿಕತೆ ಸದೃಢಗೊಳ್ಳುತ್ತದೆ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸೋಮವಾರ 117 ಜನರಿಗೆ ಒಟ್ಟು ಒಂದು ಕೋಟಿ 40 ಲಕ್ಷ ರೂಗಳ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಉಳಿದರೆ ದೇಶ ಉಳಿಯುತ್ತದೆ. ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಸೌಲಭ್ಯ ನೀಡುವ ಹಾಗೂ ಸಮೂಹ ಸಾಲಗಳನ್ನು ನೀಡುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಪರವಾಗಿದೆ. ಸಾಲಗಳನ್ನು ಪಡೆದು ಸದುಪಯೋಗ ಮಾಡಿಕೊಂಡು ಸಕಾಲದಲ್ಲಿ ವಾಪಸ್ ಮಾಡಿ ಬ್ಯಾಂಕ್ ಹಾಗೂ ತಾವೂ ಆರ್ಥಿಕವಾಗಿ ಬೆಳೆಯಬೇಕು. ಒಂದು ವರ್ಷದ ವರೆಗೆ ಬಡ್ಡಿಯಿರದೇ ನೀಡುತ್ತೇವೆ. ಬೇರೆಡೆ ಯಥೇಚ್ಛ ಬಡ್ಡಿಗೆ ಕೈಸಾಲ ಮಾಡುವುದನ್ನು ಬಿಟ್ಟು ಬ್ಯಾಂಕ್ ಮೂಲಕ ವ್ಯವಹರಿಸಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ಇನ್ನು ಒಂದು ವರ್ಷದೊಳಗೆ ಇತರೇ ಬ್ಯಾಂಕುಗಳಿಗಿಂತ ನಮ್ಮ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಂಚೂಣಿಯಲ್ಲಿರುತ್ತದೆ. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಖಾತೆಗಳನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ತೆರೆದು ವ್ಯವಹರಿಸಿ, ಬ್ಯಾಂಕ್ ಮೂಲಕ ಹಸುಗಳಿಗಾಗಿ ಸಾಲವನ್ನು ಪಡೆಯಬಹುದು. ಜಿಲ್ಲಾದ್ಯಂತ 150 ಕೋಟಿ ಸಾಲ ನೀಡುವ ಗುರಿಯಿದೆ ಎಂದು ಹೇಳಿದರು.
ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ದಯಾನಂದ್, ಮುಖಂಡ ಸಾದಲಿ ಜೈಪ್ರಕಾಶ್, ಸಾದಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಸಹಕಾರ ಸಹಾಯಕ ನಿಬಂಧಕ ಆರೀಫುಲ್ಲ, ಚಂದ್ರಶೇಖರ್, ನಟರಾಜ್, ನರಸಿಂಹರೆಡ್ಡಿ, ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿಗಳಾದ ಭೀಮಪ್ಪ, ನಾಗರಾಜ್, ರಾಮಣ್ಣ, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಡ್ಡಿ ಹಾಗೂ ಸಾಲ ಮನ್ನಾ ಮಾಡದೇ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಬಳಸಿದಲ್ಲಿ ರೈತರ ಆರ್ಥಿಕತೆ ಸದೃಢಗೊಳ್ಳುತ್ತದೆ
- Advertisement -
- Advertisement -
- Advertisement -
- Advertisement -