ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಚಿಕ್ಕಬಳ್ಳಾಪುರ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನಡೆಸಿದ ಮಕ್ಕಳಿಗೆ ಉಚಿತ ಸ್ಕೇಟಿಂಗ್ ವಿತರಣೆ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು ಮಾತನಾಡಿದರು.
ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿದ್ದು ಮಕ್ಕಳನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೇ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಹೆಚ್ಚು ಸಹಕಾರಿಯಾಗಿದ್ದು ಪೋಷಕರೂ ಹಾಗೂ ಶಾಲಾ ಆಡಳಿತ ಮಂಡಳಿಯವರು ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಬೆಳಸಬೇಕು ಎಂದರು.
ಗ್ರಾಮಾಂತರ ಠಾಣೆ ಪಿಎಸ್ಸೈ ವಿಜಯ್‌ರೆಡ್ಡಿ ಮಾತನಾಡಿ, ಮಕ್ಕಳು ಕೇವಲ ಓದುತ್ತಾ ಕಾಲ ಕಳೆದರಷ್ಟೇ ಸಾಲದು ಬದಲಿಗೆ ದೈಹಿಕವಾಗಿ ಕೂಡ ಶಕ್ತರಾಗಿರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆಯಿರುವುದಿಲ್ಲ ಎಂಬ ಪೋಷಕರ ಭಾವನೆ ಸರಿಯಲ್ಲ. ಪಾಠದ ಜೊತೆಗೆ ಆಟವಿದ್ದರೆ ಮಾತ್ರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಜಬೀಉಲ್ಲಾ ಮಾತನಾಡಿ, ನಗರ ಪ್ರದೇಶಗಳನ್ನು ಹೊರತುಪಡಿಸಿ ಸಣ್ಣ ಪುಟ್ಟ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ಕ್ರೀಡಾಸಕ್ತಿಗೆ ಬೇಕಾದ ಪ್ರೋತ್ಸಾಹ ಸಿಗದ ಕಾರಣ ಅವರು ಕ್ರೀಡೆಗಳಲ್ಲಿ ಗುರುತಿಸಿಕೊಳ್ಳಲು ಆಗುತ್ತಿಲ್ಲ. ನಗರದ ನೆಹರೂ ಕ್ರೀಡಾಂಗಣದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಮಕ್ಕಳು ಸ್ಕೇಟಿಂಗ್ ಅಭ್ಯಾಸ ಮಾಡುತ್ತಾರಾದರೂ ಅವರಿಗೆ ಅಗತ್ಯವಿರುವ ಸವಲತ್ತುಗಳು ಇಲ್ಲ. ಕ್ರೀಡಾ ಮತ್ತು ಯುವಜನೆ ಸೇವಾ ಇಲಾಖೆ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಅಗತ್ಯ ಯೋಜೆನಗಳನ್ನು ರೂಪಿಸಿದಲ್ಲಿ ಗ್ರಾಮೀಣ ಭಾಗದ ಬಹುತೇಕ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಹೆಸರು ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಮಕ್ಕಳಿಗೆ ಸ್ಕೇಟಿಂಗ್ ಸಲಕರಣೆಗಳನ್ನು ಉಚಿತವಾಗಿ ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾನಿರಂಜನ್, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್, ಎಸ್.ವಿ.ನಾಗರಾಜ್‌ರಾವ್, ಸಾಧಿಕ್, ಟಿ.ಟಿ.ನರಸಿಂಹಪ್ಪ, ಶಿವಪ್ಪ, ಕ್ರೀಡಾಪಟು ನಾರಾಯಣಸ್ವಾಮಿ, ಮಂಜುನಾಥ್, ಕ್ರೀಡಾಂಗಣದ ವ್ಯವಸ್ಥಾಪಕ ಶ್ರೀನಿವಾಸ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -