ಕಠಿಣ ಕಾನೂನುಗಳಷ್ಟೇ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲಾರವು. ಮಹಿಳೆಯರಿಗೆ ಸುರಕ್ಷಿತ ಭಾವವನ್ನು ಉಂಟುಮಾಡುವ ಕಾರ್ಯ ನಡೆಯಬೇಕಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ನಾಗದೇನಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ತಾಲ್ಲೂಕಿನಲ್ಲೂ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಮಹಿಳಾ ಘಟಕಗಳನ್ನು ಸ್ಥಾಪಿಸಿ, ಮಹಿಳೆಯರ ದೌರ್ಜನೆಯನ್ನು ತಡೆಗಟ್ಟಬೇಕು. ಮಹಿಳಾ ಘಟಕದಲ್ಲಿ ಮಹಿಳೆಯರು ನಿರ್ಭಯವಾಗಿ ತಮ್ಮ ನೋವು, ಕಷ್ಟ, ದುಃಖ, ಅನ್ಯಾಯಗಳನ್ನು ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಕಾನೂನುಗಳ ಭದ್ರತೆಯೊಂದಿಗೆ ಅನ್ಯಾಯಕ್ಕೊಳಗಾದ ಮಹಿಳೆಗೆ ಆಪ್ತ ಸಲಹೆ ಸಹಾಯ ಬಹು ಮುಖ್ಯ. ಅನೇಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿಹೋಗಿರುವ ನಿದರ್ಶನಗಳಿವೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟ ಗುರಿಯಾಗಲಿ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಶಾಶ್ವತ ನೀರಾವರಿ ಯೋಜನೆ ಕುರಿತಂತೆ ಘೋಷಣೆಗಳು ಭಾಷಣಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಕೇಳಿ ಬರುತ್ತಿವೆ. ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ಅವಕಾಶವಾದಿ ರಾಜಕಾರಣ ನಡೆಸುತ್ತಿದ್ದಾರೆ. ಕೇವಲ ಹೇಳಿಕೆಗಳನ್ನು ನೀಡದೇ ಕಳಸಾ ಬಂಡೂರಿ ಹೋರಾಟದ ಮಾದರಿಯಲ್ಲಿ ರಾಷ್ಟ್ರವ್ಯಾಪಿ ಗಮನಸೆಳೆಯುವಂತೆ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಸಭೆಯ ನಂತರ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷರನ್ನಾಗಿ ಮೂರ್ತಿ ಅವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರವನ್ನು ನೀಡಲಾಯಿತು.
ಮಾನವ ಹಕ್ಕುಗಳ ಹೋರಾಟಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲಹಳ್ಳಿ ವೆಂಕಟೇಶ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ರಾಜು, ಜಿಲ್ಲಾ ಯುವ ಘಟಕದ ಅಧ್ಯಕ್ಷ ನವೀನ್ಕುಮಾರ್, ಪ್ರಧಾನ ಕಾರ್ಯದರ್ಶಿ ಬೋದಗೂರು ನವೀನ್, ಸತೀಶ್, ನಾಗಾರ್ಜುನ, ಗೋಪಾಲ್, ಶಫೀವುಲ್ಲಾ, ಮಂಜು, ಪ್ರದೀಪ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -