ರುದ್ರಭೂಮಿ ಎಂದರೆ ಕೆಲವರಿಗೆ ಅಪಶಕುನ. ಹುಟ್ಟಿದ ಪ್ರತಿಯೊಂದು ಜೀವಿಯೂ ಮರಣಿಸಲೇ ಬೇಕು ಎಂದು ಎಲ್ಲರಿಗೂ ತಿಳಿದ ಸತ್ಯವಾದರೂ ರುದ್ರಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು ವಿರಳ. ಎಲ್ಲರಿಗೂ ಅವಶ್ಯವಿರುವ ಆದರೆ ಯಾರಿಗೂ ಬೇಡವಾದ ಸ್ಥಳವಿದು.
ನಗರದ ಕೆಲವು ಸಮಾನ ಮನಸ್ಕ ಜನರಿಂದಾಗಿ ಕಳೆ ಗಿಡಗಳ ಕೊಂಪೆಯಾಗಿದ್ದ ಹಿಂದೂ ರುದ್ರ ಭೂಮಿ ಶುಚಿತ್ವವನ್ನು ಕಂಡಿದೆ. ಒಂದು ಪ್ಲಾಟ್ಫಾರಂ ಮತ್ತು ನೆರಳಿಗಾಗಿ ಮಂಟಪವನ್ನು ನಿರ್ಮಿಸಲಾಗಿದೆ. ಇದರ ಜೊತೆಯಲ್ಲಿ ಸುಮಾರು ಒಂದೂವರೆ ಲಕ್ಷ ರೂ ಬೆಲೆಯ ಪರಿಸರ ಸ್ನೇಹಿ ಸಿಲಿಕಾನ್ ಚೇಂಬರನ್ನೂ ಅಳವಡಿಸಲಾಗಿದೆ.
ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಪವರ್ ಗ್ರಿಡ್ ಬಳಿ ಸುಮಾರು ೨೩ ಗುಂಟೆ ಹಿಂದೂ ರುದ್ರಭೂಮಿಯ ಸ್ಥಳವಿದೆ. ಸುಮಾರು ೨೫ ವರ್ಷಗಳ ಹಿಂದೆ ಇದಕ್ಕೆ ಕಾಂಪೋಂಡ್ ಮತ್ತು ಅಪರಕರ್ಮಕ್ಕೆ ಅವಶ್ಯವಿರುವ ಕಟ್ಟಡವನ್ನು ವಿವಿಧ ಸಂಘಗಳ ಸಹಕಾರದಿಂದ ಕಟ್ಟಲಾಗಿತ್ತು. ಆದರೆ ಅಲ್ಲಿ ಕಳೆಗಿಡಗಳೆಲ್ಲ ಬೆಳೆದು ಅಂತ್ಯಸಂಸ್ಕಾರಕ್ಕೆ ಹೋದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ಈಗ ಕೆಲ ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದಾಗಿ ರುದ್ರಭೂಮಿಯಲ್ಲಿ ನೆರಳಿಗಾಗಿ ಮಂಟಪ ಮತ್ತು ಸಿಲಿಕಾನ್ ಚೇಂಬರನ್ನು ಅಳವಡಿಸಲಾಗಿದೆ. ಹಿಂದೆ ಮೃತದೇಹವನ್ನು ಸುಡಲು ಸುಮಾರು ೭೫೦ ಕೆಜಿಗೂ ಹೆಚ್ಚಿನ ಸೌದೆ ಬೇಕಾಗುತ್ತಿತ್ತು. ಮಳೆಗಾಲದಲ್ಲಂತೂ ೧೦ ರಿಂದ ೨೦ ಲೀಟರ್ ಸೀಮೆಎಣ್ಣೆ ಬೇಕಾಗುತ್ತಿತ್ತು. ಆದರೆ ಈಗ ಕಡಿಮೆ ಸೌದೆಯಲ್ಲಿ ಮತ್ತು ಅಲ್ಪ ಪ್ರಮಾಣದ ಸೀಮೆಎಣ್ಣೆಯಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಬಹುದಾಗಿದೆ. ಬೂದಿ ತೆಗೆದುಕೊಳ್ಳಲೆಂದೇ ಚೇಂಬರಿನಲ್ಲಿ ಅನುಕೂಲ ಕಲ್ಪಿಸಲಾಗಿದೆ. ಶಾಖ ಹೊರ ಹೋಗದಂತೆ, ಹೊಗೆ ಇರದಿರುವಂತೆ ಇದನ್ನು ರೂಪಿಸಲಾಗಿದೆ.
’ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ರುದ್ರಭೂಮಿಯಲ್ಲಿನ ಸೌಕರ್ಯಗಳನ್ನು ಕಂಡು ನಮ್ಮಲ್ಲೂ ಈ ರೀತಿ ಅನುಕೂಲಗಳನ್ನು ಕಲ್ಪಿಸಬೇಕೆಂದು ಕೆಲ ಸಮಾನ ಮನಸ್ಕರೊಂದಿಗೆ ಚರ್ಚಿಸಿದೆ. ದೇವನಹಳ್ಳಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ್ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಗೆ ಕಳುಹಿಸಿದರು. ಅಲ್ಲಿನ ನಿರ್ದೇಶಕ ಜಯರಾಂ ನೆಲ್ಲಿತ್ತಾಯ ಅವರಿಗೆ ಸಿಲಿಕಾನ್ ಚೇಂಬರಿನ ಅವಶ್ಯಕತೆಯನ್ನು ತಿಳಿಸಿ ಮನವಿ ಸಲ್ಲಿಸಿದೆವು. ಅವರು ಇಲ್ಲಿ ಸ್ಥಳ ಪರಿಶೀಲಿಸಿ ಮಂಜೂರು ಮಾಡಿದರು. ಅಷ್ಟರಲ್ಲಿ ಪುರಸಭೆಯ ಎಸ್ಎಫ್ಸಿ ಅನುದಾನದಲ್ಲಿ ೩ ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ಮತ್ತು ಪ್ಲಾಟ್ಫಾರಂ ನಿರ್ಮಿಸಲು ನಡೆಸಿದ ಪ್ರಯತ್ನದಲ್ಲಿ ಸಫಲರಾಗಿದ್ದೆವು’ ಎಂದು ತಮ್ಮ ಭಗೀರಥ ಪ್ರಯತ್ನದ ಬಗ್ಗೆ ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
’ರುದ್ರಭೂಮಿಗೆ ಅವಶ್ಯವಿರುವ ರಸ್ತೆ, ನೀರು ಮೊದಲಾದ ಮೂಲಭೂತ ಸೌಕರ್ಯ ಕಲ್ಪಿಸಲು ಪುರಸಭೆಗೆ ಮತ್ತು ಶವಸಾಗಾಣಿಕಾ ವಾಹನಕ್ಕೆ ಆಗ ಶಾಸಕರಾಗಿದ್ದ ವಿ.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದೆವು. ಶಾಸಕರ ಅನುದಾನದಲ್ಲಿ ೧೦ ಲಕ್ಷ ರೂ ಅನುದಾನದ ಪತ್ರವನ್ನು ಶವಸಾಗಾಣಿಕಾ ವಾಹನಕ್ಕೆ ಪಡೆದೆವು. ಪುರಸಭೆಯವರು ರುದ್ರಭೂಮಿ ಆವರಣಕ್ಕೆ ಕಾಂಕ್ರೀಟ್ ಬೆಡ್ ಹಾಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಧರ್ಮಸ್ಥಳದವರು ಸಿಲಿಕಾನ್ ಚೇಂಬರನ್ನು ಉಚಿತವಾಗಿ ನೀಡಿದರೂ ಅದನ್ನು ಸಾಗಿಸಿ ಜೋಡಣೆ ಮಾಡಿಸುವಷ್ಟರಲ್ಲಿ ೪೦ ಸಾವಿರ ರೂಗಳಷ್ಟು ಖರ್ಚಾಯಿತು. ಹಲವಾರು ಸಮಾನಮನಸ್ಕರು ಕೈಜೋಡಿಸಿದ್ದರಿಂದಾಗಿ, ತಮ್ಮ ಕೆಲಸ ಕಾರ್ಯ ಬದಿಗಿಟ್ಟು ಓಡಾಡಿದ್ದರಿಂದಾಗಿ ರುದ್ರಭೂಮಿಯ ಅಭಿವೃದ್ಧಿ ಕೆಲಸ ನಡೆಯಿತು. ಎನ್.ಶ್ರೀಕಾಂತ್, ಎನ್.ಲಕ್ಷ್ಮೀನಾರಾಯಣ, ಎಸ್.ವಿ.ನಾಗರಾಜರಾವ್ ಅವರೊಂದಿಗೆ ಎಂ.ರಾಜಣ್ಣ, ಮಂಜುಳಾಮಣಿ, ಹನುಮಂತೇಗೌಡ, ಬಿ.ಕೃಷ್ಣಮೂರ್ತಿ, ವಿ.ಕೃಷ್ಣ, ಎ.ಜಿ.ನಾಗೇಂದ್ರ, ಸತ್ಯನಾರಾಯಣಶೆಟ್ಟಿ, ಮಧುಸೂದನ್ ಹಾಗೂ ಕೆಲವು ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದ್ದಾರೆ’ ಎಂದು ಅವರು ವಿವರಿಸಿದರು.
– ಡಿ.ಜಿ.ಮಲ್ಲಿಕಾರ್ಜುನ.
- Advertisement -
- Advertisement -
- Advertisement -
- Advertisement -