ಸಾರ್ವಜನಿಕರಿಗೆ ಬರೀ ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದ ಅಂಚೆ ಇಲಾಖೆ ಇದೀಗ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಿ ಹೊಸ ದಾಖಲೆಯತ್ತ ಹೆಜ್ಜೆ ಇಟ್ಟಿದೆ. ಕೋರ್ಬ್ಯಾಂಕಿಂಗ್ ವ್ಯವಸ್ಥೆಯಿಂದ ಗ್ರಾಹಕರು ದೇಶದ ಯಾವುದೇ ಭಾಗದಿಂದ ಹಣ ವರ್ಗಾವಣೆ ಹಾಗೂ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೋಲಾರ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೆ.ಮುನಿಶಾಮಯ್ಯ ತಿಳಿಸಿದರು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಸೋಮವಾರ ಅಂಚೆ ಕಚೇರಿ ಗ್ರಾಹಕರಿಗೆ ತುರ್ತು ಸೇವೆ ಪೂರೈಸುವ ಉದ್ದೇಶದಿಂದ ಎಲ್ಲ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ (ಸಿ ಬಿ ಎಸ್ ಆನ್ಲೈನ್)ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋಲಾರ ವಿಭಾಗದ 63 ಅಂಚೆ ಕಚೇರಿಗಳು ಗಣಕೀಕೃತವಾಗಿದ್ದು, ಕೋರ್ ಬ್ಯಾಂಕಿಂಗ್ ಸೇವೆ ನೀಡುತ್ತಿವೆ. ಈಗ ಶಿಡ್ಲಘಟ್ಟದಲ್ಲಿ ಪ್ರಾರಂಭಿಸುವುದರೊಂದಿಗೆ ಕೋಲಾರ ವಿಭಾಗ ಸಂಪೂರ್ಣಗೊಂಡಿದೆ. ಅಂಚೆ ಇಲಾಖೆಯ ದಕ್ಷಿಣ ವಲಯದಲ್ಲಿ ಮೊಟ್ಟಮೊದಲು ಕೋರ್ ಬ್ಯಾಂಕಿಂಗ್ ಸೇವೆ ನೀಡಿರುವ ವಿಭಾಗವು ಕೋಲಾರದ್ದಾಗಿದೆ. ತಾಲ್ಲೂಕಿನ ಬುರುಡುಗುಂಟೆಯಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದಿರುವುದರಿಂದ ಅಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಅಂಚೆ ಇಲಾಖೆಯಿಂದ ಎ.ಟಿ.ಎಂ ಕೂಡ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಅಂಚೆ ಇಲಾಖೆಯ ಎಟಿಎಂ ಕಾರ್ಡ್ ಬಳಸಿ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಡ್ರಾ ಮಾಡುವ ಯೋಜನೆ ಆರಂಭವಾಗಲಿದೆ. ಗ್ರಾಹಕರು ಉಳಿತಾಯ ಖಾತೆ ಮೂಲಕ ಅಂಚೆ ಕಚೇರಿಯಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದು. ಅಂಚೆ ಕಚೇರಿಯ ಮುಖಾಂತರ ದೇಶದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಣದ ವ್ಯವಹಾರ ಮಾಡಬಹುದು ಎಂದರು.
ಕೋಲಾರ ವಿಭಾಗದ ಎಲ್ಲ ಅಂಚೆ ಕಚೇರಿಗಳು ಈಗ ಕಾಗದ ರಹಿತವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ ಗ್ರಾಹಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಲ್ಲಿ ವಾರ್ಷಿಕ 330 ರೂ ಪಾವತಿಸಬೇಕು. ಈ ವಿಮೆ 18 ರಿಂದ 50 ವರ್ಷದ ವರೆಗೆ ಚಾಲ್ತಿಯಲ್ಲಿರುತ್ತದೆ. ಖಾತೆ ದಾರ ಮೃತಪಟ್ಟರೆ 2 ಲಕ್ಷ ರೂ ವಿಮೆ ಹಣ ವಿತರಿಸಲಾಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ 18 ರಿಂದ 70 ವರ್ಷದವರೆಗೆ ವಿಮೆ ಚಾಲ್ತಿಯಲ್ಲಿರುತ್ತದೆ. ಖಾತೆದಾರರು ವಾರ್ಷಿಕ 12 ರೂ ಪಾವತಿಸಬೇಕು. ಅಪಘಾತವಾದರೆ 2 ಲಕ್ಷ ರೂಗಳವರೆಗೆ ವಿಮೆ ಹಣ ದೊರೆಯುತ್ತದೆ. ಗ್ರಾಮೀಣ ಪ್ರದೇಶದ ಜನರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪೋಸ್ಟ್ ಮಾಸ್ಟರ್ ಗಜೇಂದ್ರ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಶೀವಣ್ಣ, ವಿಭಾಗೀಯ ಅಧಿಕಾರಿ ಸತೀಶ್, ಅಧಿಕಾರಿಗಳಾದ ನರಸಿಂಹಪ್ಪ, ಬಿ.ಎಂ.ಮಂಜುನಾಥ್, ಎನ್.ಜೆ.ಮಂಜುನಾಥ್, ವೆಂಕಟಾಚಲಪತಿ, ಆಶಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -