ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಹತ್ತರಿಂದ ಹದಿನೈದು ಸಾವಿರ ಮಂದಿ ತಾಲ್ಲೂಕಿನಿಂದ ಚಿಕ್ಕಬಳ್ಳಾಪುರಕ್ಕೆ ಗುರುವಾರ ಬೈಕ್ ರ್ಯಾಲಿಯ ಮೂಲಕ ಹೋಗುವುದಾಗಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಗ್ರಾಮ ಪಂಚಾಯತಿಗೂ ತೆರಳಿ ಕೇವಲ ನೀರಿಗಾಗಿ ನಡೆಸುವ ಹೋರಾಟಕ್ಕೆ ಬೆಂಬಲವಾಗಿ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸುವಂತೆ ಕೋರಿದ್ದೇವೆ. ಈಗಾಗಲೇ ಸುಮಾರು 7 ರಿಂದ 8 ಸಾವಿರ ಬೈಕ್ಗಳನ್ನು ಸ್ವಯಂಪ್ರೇರಣೆಯಿಂದ ನೋಂದಾಯಿಸಿದ್ದಾರೆ. ಪ್ರಜಾತಂತ್ರದಲ್ಲಿ ಜನರೇ ಶಕ್ತಿ. ಸರ್ಕಾರಕ್ಕೆ ಜನರ ಮೂಲಕ ಒತ್ತಡ ಹೇರದೆ ಈಗ ಬೇರೆ ಮಾರ್ಗವಿಲ್ಲ ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಹೊರವಲಯದ ಚದಲಪುರದ ಬಳಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಿ ತಾಲ್ಲೂಕಿನಿಂದ ನಡೆಸುವ ಬೈಕ್ ರ್ಯಾಲಿಯ ಉದ್ದೇಶ ಬಯಲು ಸೀಮೆಗೆ ಶಾಶ್ವತ ನೀರು ಎಂಬುದಷ್ಟೇ ಆಗಿದೆ. ದಿವಂಗತ ದೇವರಾಜ ಅರಸು ಅವರ ಸರ್ಕಾರದಿಂದ, ನಂತರದ ಎಸ್.ಎಂ.ಕೃಷ್ಣ ಅವರ ಸರ್ಕಾರ ಹಾಗೂ ಬಂಗಾರಪ್ಪ ಅವರ ಸರ್ಕಾರದ ಕಾಲದಲ್ಲಿ ನಡೆದಿರುವ ನೀರಾವರಿ ಯೋಜನೆಗಳು, ಇದುವರೆಗಿನ ಸಮಸ್ಯೆ ಹಾಗೂ ಪರಿಹಾರ ಕುರಿತಂತೆ ವಿವರವಾದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರಿಗೂ ಖುದ್ದಾಗಿ ನೀರಿನ ಅವಶ್ಯಕತೆಯನ್ನು ತಿಳಿಸಲಾಗುವುದು. ಬಜೆಟ್ನಲ್ಲಿ ನೀರಾವರಿ ಯೋಜನೆಗೆ ಹಣವನ್ನು ನಿಗದಿಪಡಿಸಿದಲ್ಲಿ ಚಾಲನೆ ಸಿಗಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಡಿ.ಎಸ್.ಎನ್.ರಾಜು, ಆರ್.ಶ್ರೀನಿವಾಸ್, ಮೌಲಾ, ಕೃಷ್ಣಪ್ಪ, ವೆಂಕಟೇಶ್, ಅಬ್ದುಲ್ ಅಜೀಜ್, ಸಂತೋಷ್, ಶಂಕರ್, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -
?