ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಿದರು.
ಏಳನೇ ವೇತನ ಆಯೋಗ ತಕ್ಷಣದಿಂದ ಜಾರಿಯಾಗಲಿ, ಕೇಂದ್ರ ಸರ್ಕಾರದ ನೌಕರರಿಗೆ ಸಮನಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು. ಎನ್.ಪಿ.ಎಸ್ ವಾಪಸ್ ಪಡೆಯಬೇಕು ಮತ್ತು ಹಳೆಯ ಪೆನ್ಶನ್ ಪದ್ಧತಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಕಚೇರಿ, ರೇಷ್ಮೆ ಗೂಡಿನ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ಸರ್ಕಾರಿ ನೌಕರರ ಮುಷ್ಕರದಿಂದಾಗಿ ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರು ಪರದಾಡುವಂತಾಗಿತ್ತು.
ನಗರದ ಬಸ್ ನಿಲ್ದಾಣದ ಬಳಿಯ ರೇಷ್ಮೆ ಬಿತ್ತನೆ ಕೋಠಿ ಬಳಿಯಿಂದ ಸರ್ಕಾರಿ ನೌಕರರು ಮೆರವಣಿಗೆಯಲ್ಲಿ ಸಾಗಿದರು. ಬಸ್ ನಿಲ್ದಾಣದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟಿಸಿದರು. ಟಿ.ಬಿ.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗಿ ತಾಲ್ಲೂಕು ಕಚೇರಿಯ ಮುಂದೆ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸರ್ದಾರ್ ಚಾಂದ್ಪಾಷ, ಅಕ್ಕಲರೆಡ್ಡಿ, ಶ್ರೀರಾಮಯ್ಯ, ಬೈರಾರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಸಮೀವುಲ್ಲ, ಕೇಶವರೆಡ್ಡಿ, ವಿಜಯಕುಮಾರ್, ಎಚ್.ಸಿ.ಮೋಹನ್, ಸೋಮಶೇಖರ್, ಟಿ.ಟಿ.ನರಸಿಂಹಪ್ಪ, ನಾರಾಯಣಸ್ವಾಮಿ, ರಾಜಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -