ನಗರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಗ್ನಿಶಾಮಕ ಠಾಣೆಯು ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆಯನ್ನು ನಗರದ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹಳೆಯ ನ್ಯಾಯಾಲಯದ ಕಟ್ಟಡವನ್ನು ಬಳಕೆ ಮಾಡಿಕೊಳ್ಳುವಂತೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಶಾಸಕ ಎಂ.ರಾಜಣ್ಣ ತಿಳಿಸಿದ್ದಾರೆ.
ನಗರದ ಹಳೇಯ ನ್ಯಾಯಾಲಯದ ಕಟ್ಟಡವನ್ನು ವೀಕ್ಷಣೆ ಮಾಡಿದ ಅವರು, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತಿ, ನಗರ ಪೊಲೀಸ್ಠಾಣೆ, ತೋಟಗಾರಿಕಾ ಇಲಾಖೆ, ಕೃಷಿ ಸಹಾಯಕ ನಿರ್ದೇಶಕರ ಇಲಾಖೆಗಳ ಸಮೀಪದಲ್ಲೆ ಇರುವಂತಹ ಹಳೆಯ ನ್ಯಾಯಾಲಯ ಸಂಕೀರ್ಣದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಚೇರಿಯನ್ನು ಮಾಡಿಕೊಂಡು ಮುಂದಿನ ಆವರಣದಲ್ಲಿ ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ನಗರಸಭಾ ಸದಸ್ಯ ಅಪ್ಸರ್ಪಾಷಾ, ಮಳ್ಳೂರಯ್ಯ, ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೂರು ವರ್ಷದ ಕಟ್ಟಡ
ಹಳೆಯ ನ್ಯಾಯಾಲಯದ ಕಟ್ಟಡವನ್ನು ಕಟ್ಟಿದ್ದು ೧೯೧೮ರಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಟ್ಟಡವು ಬ್ರಿಟೀಷರ ತಾಲ್ಲೂಕು ಆಡಳಿತ ಕಚೇರಿಯಾಗಿತ್ತು. ಮರಣದಂಡನೆ ವಿಧಿಸುವ ನೇಣು ಗಂಬದ ಕುರುಹುಗಳು ಈಗಲೂ ಈ ಕಟ್ಟಡದಲ್ಲಿ ಕಾಣಬಹುದಾಗಿದೆ. ಸ್ವಾತಂತ್ರ್ಯಾ ನಂತರ ಇದೇ ಕಟ್ಟಡದ ಒಂದು ಭಾಗದಲ್ಲಿ ಪೊಲೀಸ್ ಸ್ಟೇಷನ್ ಮತ್ತು ಇನ್ನೊಂದು ಭಾಗದಲ್ಲಿ ತಾಲೂಕು ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಟ್ಟಡಕ್ಕೆ ಪೋಲೀಸ್ ಸ್ಟೇಷನ್ ವರ್ಗಾವಣೆಯಾಯ್ತು. ಮಿನಿವಿಧಾನಸೌಧವಾದ ಮೇಲೆ ಆಡಳಿತ ಕಚೇರಿಯೂ ಅಲ್ಲಿಗೆ ಹೋಯಿತು. ಆಗ ಸ್ವಂತ ಕಟ್ಟಡವಿರದಿದ್ದರಿಂದ ನ್ಯಾಯವಾದಿಗಳ ವಶಕ್ಕೆ ಈ ಕಟ್ಟಡ ಬಂತು. ಈ ಕಟ್ಟಡದ ಮಧ್ಯಭಾಗದ ಖಾಲಿ ಜಾಗದಲ್ಲಿ ವಕೀಲರೆಲ್ಲರ ಆಸಕ್ತಿಯಿಂದಾಗಿ ತರತರದ ಹೂಗಿಡಗಳನ್ನು ನೆಟ್ಟಿದ್ದರು. ಇತ್ತೀಚೆಗೆ ದಿಬ್ಬೂರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾದ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ನ್ಯಾಯಾಲಯ ವರ್ಗಾವಣೆಯಾದ್ದರಿಂದ ಈ ಕಟ್ಟಡವು ಖಾಲಿಯಾಗಿತ್ತು. ಇದೀಗ ಇದು ಅಗ್ನಿಶಾಮಕ ಠಾಣೆಯಾಗಲಿದೆ.
- Advertisement -
- Advertisement -
- Advertisement -
- Advertisement -