‘ಇನ್ನಿ ಪಂಟ್ಲು ಪೆಟ್ಟೇವಾಳ್ಳು ದೇಶಮ್ಲು ಇಂಕಾ ಉಂಡಾರಾ?’ (ಇಷ್ಟು ಬೆಳೆಗಳನ್ನು ಒಂದೆಡೆ ಬೆಳೆಯುವವರು ದೇಶದಲ್ಲಿದ್ದಾರಾ?) ಎಂಬ ಅಚ್ಚರಿಯ ಉದ್ಘಾರ ಮಹಿಳೆಯರದ್ದು.
ತಾಲ್ಲೂಕಿನ ಹಿತ್ತಲಹಳ್ಳಿಯ ಗೋಪಾಲಗೌಡರ ೩೫ಕ್ಕೂ ಹೆಚ್ಚು ವಿಧವಿಧವಾದ ಮಿಶ್ರ ಬೆಳೆಗಳನ್ನು ಬೆಳೆದ ತೋಟಕ್ಕೆ ಮಂಗಳವಾರ ಭೇಟಿ ನೀಡಿದ್ದ ಚಿಂತಾಮಣಿಯ ಶ್ರೀಧರ್ಮಸ್ಥಳ ಯೋಜನಾ ಸಂಘದ ಸ್ವ ಸಹಾಯ ಸಂಘಗಳ ರೈತ ಮಹಿಳೆಯರು ಇಷ್ಟೊಂದು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಸಾಧ್ಯತೆಗಳನ್ನು ಕಂಡು ಅಚ್ಚರಿಗೊಂಡರು.
‘ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತದಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳಬಹುದು, ಇದಕ್ಕೂ ಮಿಗಿಲಾಗಿ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಬಹುದು’ ಎಂದು ಈ ಸಂದರ್ಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಎಚ್.ಜಿ.ಗೋಪಾಲಗೌಡರು ಮಿಶ್ರ ಬೆಳೆಗಳಿಂದಾಗುವ ಲಾಭಗಳ ಬಗ್ಗೆ ವಿವರಿಸಿದಾಗ ಅವರು ಹೌದಲ್ಲ ಎಂದು ತಲೆದೂಗಿದರು.
ನಾಲ್ಕು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ, ಮಾವು, ಗೋಡಂಬಿ, ತೊಗರಿ, ರಾಗಿ, ನೆಲಗಡಲೆ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಚೆಂಡು ಹೂವು ಸೇರಿದಂತೆ ೩೫ಕ್ಕೂ ಹೆಚ್ಚು ವಿಧವಾದ ಮರ ಗಿಡ ತರಕಾರಿ, ದವಸ ದಾನ್ಯ ಇನ್ನಿತರೆ ಮಿಶ್ರ ಬೆಳೆಗಳನ್ನು ಬೆಳೆದಿರುವುದನ್ನು ಕಂಡ ರೈತ ಮಹಿಳೆಯರು ಮೂಕ ವಿಸ್ಮಿತರಾದರು.
ಒಂದೆ ತರನಾದ ಬೆಳೆಗಳನ್ನು ಬೆಳೆಯುವುದರಿಂದ ಭೂಮಿಯಲ್ಲಿನ ಕ್ಷಾರ ಶಕ್ತಿ ಕುಂದುತ್ತದೆ. ಅದಕ್ಕೂ ಮಿಗಿಲಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದರೆ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ಒಂದು ಬೆಳೆಯ ಬೆಲೆ ಕುಸಿದರೂ ಮತ್ತೊಂದು ಬೆಳೆಗೆ ಬೆಲೆ ಸಿಗಲಿದೆ. ಮೊದಲು ಎರಡು ಅಥವಾ ಮೂರು ಗುಂಟೆ ಪ್ರದೇಶದಲ್ಲಿ ಮನೆಗೆ ಅಗತ್ಯವಾಗುವ ತರಕಾರಿ, ಹೂವುಗಳನ್ನು ಬೆಳೆಯಿರಿ. ಇದರಿಂದ ನಿಮ್ಮ ಮನೆಗೆ ಅಗತ್ಯವಾದ ಹೂ ಹಣ್ಣು ತರಕಾರಿಗಳನ್ನು ಖರೀಸುವ ತಾಪತ್ರಯ ತಪ್ಪುತ್ತದೆ ಎಂದು ಗೋಪಾಲಗೌಡರು ತಿಳಿಸಿದರು.
ನೀರಿನ ಲಭ್ಯತೆ ನೋಡಿಕೊಂಡು ಹೆಚ್ಚು ಜಮೀನಿನಲ್ಲಿ ಮಾರಾಟ ಮಾಡುವಂತ ತರಕಾರಿ ಹೂವು ಹಣ್ಣು ದೀರ್ಘ ಕಾಲದ ಮರಗಳನ್ನು ಬೆಳೆಸಬೇಕು. ಇದರ ಜತೆಗೆ ಕುರಿ ಕೋಳಿ ಹಸುಗಳನ್ನು ಸಾಕಾಣಿಕೆ
ಜತೆಗೆ ನೀರಾವರಿ ಸೌಲಭ್ಯ ಇಲ್ಲದೆ ಇದ್ದಾಗ ಮಳೆ ನೀರನ್ನು ಸಂಗ್ರಹಿಸುವ ಕೃಷಿ ಹೊಂಡದ ಅನುಕೂಲಗಳ ಬಗ್ಗೆ ಕೂಡ ತಿಳಿಸಿಕೊಟ್ಟರು.
ಕೊಳವೆಬಾವಿಯ ನೀರು ಹಾಗೂ ಕೃಷಿ ಹೊಂಡದ ನೀರನ್ನು ಬಳಸಿಕೊಂಡರೆ ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಫೆಬ್ರವರಿ ಮಾರ್ಚ್‌ವರೆಗೂ ಬೆಳೆಗಳಿಗೆ ಹಾಯಿಸಿಕೊಳ್ಳಬಹುದು. ಅಷ್ಟೊತ್ತಿಗೆ ಮಳೆಗಾಲ ಶುರುವಾಗುತ್ತದೆ ಎಂದು ವಿವರಿಸಿದರು.
ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ ಇನ್ನಿತರೆ ಕ್ಷೇತ್ರಗಳಿಗೆ ಸಂಬಂದಿಸಿದ ಎಲ್ಲ ಮರ ಗಿಡ ತರಕಾರಿ ಹಣ್ಣು ಹಂಪಲನ್ನು ಬೆಳೆಯುವುದರಿಂದ ಆಯಾ ಇಲಾಖೆಗಳಿಂದಲೂ ನರೇಗಾ ಯೋಜನೆಯಡಿ ಸಹಾಯ ಧನವೂ ಸಿಗಲಿದೆ ಎಂದು ಮಿಶ್ರ ಬೆಳೆಗಳ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಮಿಶ್ರ ಬೆಳೆಗಳನ್ನು ಬೆಳೆಯುವ ವಿಧಾನ, ಅನುಸರಿಬೇಕಾದ ಕ್ರಮಗಳು, ಯಾವ ಸಮಯದಲ್ಲಿ ಯಾವ ಬೆಳೆಗಳನ್ನು ಬೆಳೆದರೆ ಸೂಕ್ತ, ಮಾರುಕಟ್ಟೆಗೆ ಅನುಗುಣವಾಗಿ ಬೆಳೆಪದ್ಧತಿಯನ್ನು ನಿರ್ಧರಿಸುವುದು ಹೇಗೆ ಮೊದಲಾದ ವಿಚಾರಗಳ ಬಗ್ಗೆ ರೈತ ಮಹಿಳೆಯರು ಮಾಹಿತಿ ಪಡೆದುಕೊಂಡರು.
ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಧಿಕಾರಿಗಳಾದ ಜನಾರ್ಧನ್, ಶಿವಾರೆಡ್ಡಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -







