Mallur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿಬೇಟೆ ವೇಳೆ ನಾಯಿಯ ಸ್ಮಾರಕವಾಗಿ ನಿರ್ಮಿಸಲಾದ ಹಂದಿಬೇಟೆ ವೀರಗಲ್ಲು ಶಿಲ್ಪ ಪತ್ತೆಯಾಗಿದೆ. ಇದರೊಂದಿಗೆ ನಾಲ್ಕು ಸಾಲುಗಳ ಕನ್ನಡ ಶಾಸನವೂ ಕಂಡುಬಂದಿದೆ. ಸ್ಥಳೀಯ ಇತಿಹಾಸಾಸಕ್ತರು ಮತ್ತು ಶಾಸನ ತಜ್ಞರ ಪ್ರಕಾರ, ಈ ಶಿಲ್ಪವು ಸುಮಾರು 15ನೇ ಶತಮಾನದ್ದು (ಕ್ರಿ.ಶ. 1432ರ ಮಾರ್ಚ್ 8, ಶನಿವಾರ) ಎಂದು ಅಂದಾಜಿಸಲಾಗಿದೆ.
ಮಣ್ಣಿನಲ್ಲಿ ಹುದುಗಿದ್ದ ಈ ಶಿಲ್ಪವನ್ನು ಗ್ರಾಮಸ್ಥರಾದ ನಾರಾಯಣಸ್ವಾಮಿ, ಮಂಜುನಾಥ್, ನಾಣಿ, ರೆಡ್ಡಿ, ಬೇಕರಿ ವೆಂಕಟೇಶ್, ಮಧು, ಶ್ರೀನಿವಾಸ ನಾಯಕ್, ನರಸಿಂಹಮೂರ್ತಿ, ಅಶೋಕ್ ಅವರು ಪತ್ತೆಹಚ್ಚಿದರು. ನಂತರ ಶಾಸನ ತಜ್ಞರಾದ ಧನಪಾಲ್ ಮತ್ತು ತ್ಯಾಗರಾಜ್ ಅವರು ಶಾಸನದಲ್ಲಿರುವ ಲಿಪಿಯನ್ನು ಓದಿದರು.

ಶಾಸನದ ಪ್ರಕಾರ, ಗ್ರಾಮದ ವೊಂಡೆದೆಯರ ಬಾಣ ಎಂಬ ವ್ಯಕ್ತಿ ತನ್ನ “ಬೀಮಾಂಚ” ಎಂಬ ನಾಯಿಯೊಂದಿಗೆ ಹಂದಿಬೇಟೆಗೆ ತೆರಳಿದಾಗ, ಬಲಿಷ್ಠ ಹಂದಿಯೊಂದಿಗೆ ಹೋರಾಟ ನಡೆಯಿತು. ಹಂದಿಯನ್ನು ಕೊಂದು ನಾಯಿಯೂ ಪ್ರಾಣತ್ಯಾಗ ಮಾಡಿತು. ತನ್ನ ಮುದ್ದಿನ ನಾಯಿಯ ಶೌರ್ಯವನ್ನು ನೆನಪಿಸಲು “ಸೂರ್ಯ ಚಂದ್ರರಿರುವವರೆಗೂ ನಾಯಿಯ ವೀರತ್ವ ಉಳಿಯಲಿ” ಎಂಬ ಉದ್ದೇಶದಿಂದ ಈ ಸ್ಮಾರಕವನ್ನು ನಿರ್ಮಿಸಲಾಗಿದೆ ಎಂದು ಶಾಸನದಿಂದ ತಿಳಿಯುತ್ತದೆ.
ಈ ಆವಿಷ್ಕಾರದ ಮಹತ್ವದ ಬಗ್ಗೆ ಶಾಸನ ತಜ್ಞ ಡಿ.ಎನ್. ಸುದರ್ಶನರೆಡ್ಡಿ ಅವರು ವಿವರಿಸಿ, “ಹಂದಿಬೇಟೆ ವೀರಗಲ್ಲುಗಳು ಕೇವಲ ಸ್ಥಳೀಯ ಸ್ಮಾರಕಗಳಲ್ಲ; ಇವು ಕನ್ನಡನಾಡಿನ ಇತಿಹಾಸದ ಮಹತ್ವದ ಘಟನೆಗಳ ಸಾಕ್ಷಿಗಳಾಗಿವೆ. ಮಂಡ್ಯ ಜಿಲ್ಲೆಯ ಆತಕೂರಿನ ಹಂದಿಬೇಟೆ ವೀರಗಲ್ಲು, ಕ್ರಿ.ಶ. 943ರಲ್ಲಿ ನಡೆದ ತಕ್ಕೋಳಂ ಯುದ್ಧದಲ್ಲಿ ಕನ್ನಡಿಗರ ಚೋಳರ ಮೇಲೆ ಜಯದ ದಾಖಲೆ ನೀಡುತ್ತದೆ,” ಎಂದು ಹೇಳಿದರು.
ಅವರು ಮುಂದುವರಿಸಿ, “ಆತಕೂರಿನ ಶಾಸನದಿಂದ ರಾಷ್ಟ್ರಕೂಟರ ಮೂರನೇ ಕೃಷ್ಣ ಮತ್ತು ಗಂಗರಾಜಕುಮಾರ ಬೂತುಗನ ಸಾಹಸ ತಿಳಿಯುತ್ತದೆ. ಬೂತುಗನ ಸಹಚರ ಮನಲೇರ ಮತ್ತು ಅವನ ನಾಯಿ ‘ಕಾಳಿ’ ಕುರಿತಾದ ಕಥೆಯು ಕೂಡ ಈ ಶಾಸನಗಳಲ್ಲಿ ದಾಖಲಾಗಿದೆ. ಕಾಳಿ ಹಂದಿಯೊಡನೆ ಹೋರಾಡಿ ಮರಣ ಹೊಂದಿದಾಗ, ಅದಕ್ಕಾಗಿ ದೇವಾಲಯವನ್ನೇ ನಿರ್ಮಿಸಿ ಪೂಜೆ ವ್ಯವಸ್ಥೆ ಮಾಡಲಾಗಿತ್ತು. ಇಂತಹ ವೀರಗಲ್ಲುಗಳು ಸಿಕ್ಕಿರಲಿಲ್ಲವಾದರೆ ಕನ್ನದಿಗಾರ ಇತಿಹಾಸದ ಅನೇಕ ಅಧ್ಯಾಯಗಳು ಮರೆಯಾಗಿ ಹೋಗುತ್ತವೆ,” ಎಂದರು.
For Daily Updates WhatsApp ‘HI’ to 7406303366









