Sugaturu, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಜಯಪುರ ರೋಟರಿ, ಸುಂದರಲಾಲ್ ಬಹುಗುಣ ಇಕೋಕ್ಲಬ್‌ಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಓಜೋನ್ ಸಂರಕ್ಷಣಾ ದಿನಾಚರಣೆ (International Day for the Preservation of the Ozone Layer), ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ (Sir M V Birth Anniversary), ವಿಶ್ವಕರ್ಮಜಯಂತಿ (Vishwakarma Jayanti) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಂದರಲಾಲ್ ಬಹುಗುಣ ಇಕೋಕ್ಲಬ್‌ನ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಅವರು ಮಾತನಾಡಿದರು.
ಆಧುನಿಕತೆಯ ಸೋಗಿನಲ್ಲಿ ಮಾನವನು ಮಾಡುತ್ತಿರುವ ಅಭಿವೃದ್ಧಿ ಸಂಬಂಧಿ ಯೋಜನೆಗಳು, ತಂತ್ರಜ್ಞಾನ, ಕೈಗಾರಿಕೆಗಳು ಮುಂತಾದ ಚಟುವಟಿಕೆಗಳಿಂದ ಹೊರಸೂಸುತ್ತಿರುವ ರಾಸಾಯನಿಕ ಮತ್ತು ಹಾನಿಕಾರಕ ವಸ್ತುಗಳು, ಅಧಿಕಗೊಳ್ಳುತ್ತಿರುವ ಜಾಗತಿಕ ತಾಪಮಾನವು ಓಜೋನ್ ಪದರದ ಮೇಲೆ ದುಷ್ಪರಿಣಾಮ ಬೀರಿ ಶಿಥಿಲಗೊಳ್ಳಲು ಕಾರಣವಾಗುತ್ತಿದೆ. ಪರಿಸರ ಸಂರಕ್ಷಣೆಯೊಂದಿಗೆ ಓಜೋನ್ ಪದರವನ್ನು ರಕ್ಷಿಸಿಕೊಳ್ಳಲು ಜಾಗೃತಿ ಅಭಿಯಾನವಾಗಬೇಕಿದೆ ಎಂದು ತಿಳಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಸುಂದರ ನಗರ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ನೀರ್ಗಾಲುವೆ, ಡ್ಯಾಂಗಳನ್ನು ನಿರ್ಮಿಸಿ ಸರ್.ಎಂ.ವಿಶ್ವೇಶ್ವರಯ್ಯ ಮಾದರಿಯಾಗಿದ್ದಾರೆ. ವಿಜ್ಞಾನ, ತಂತ್ರಜ್ಞಾನಗಳನ್ನು ಬಳಸಿ ದೂರದೃಷ್ಟಿಯಿರಿಸಿಕೊಂಡು ನಿರ್ಮಿಸಿದ ಕನ್ನಂಬಾಡಿಕಟ್ಟೆ, ಪಾಲಿಟೆಕ್ನಿಕ್, ಮೈಸೂರುಬ್ಯಾಂಕ್, ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಗಂಧದ ಸಾಬೂನು ಕಾರ್ಖಾನೆ, ವಿಶ್ವವಿದ್ಯಾಲಯಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ಜಗದೀಶ್ , ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಶಿವಶಂಕರಪ್ಪ, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ಎಸ್‌ಡಿಎಂಸಿ ಸದಸ್ಯ ಎಂ.ನಾರಾಯಣಸ್ವಾಮಿ, ಎಸ್.ಎಲ್.ನಾರಾಯಣಸ್ವಾಮಿ, ಮುನಿರಾಜಪ್ಪ, ಬೋಧಕವರ್ಗದವರು ಹಾಜರಿದ್ದರು.