ಮಣ್ಣಿನ ಹಣತೆ ವಿತರಿಸಿ ಕಸಾಪ ವತಿಯಿಂದ ದೀಪಾವಳಿ ಆಚರಣೆ

ಪಟಾಕಿ ಬದಲು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಿ ಎಂಬ ಸಂದೇಶ ಸಾರುವುದು ನಮ್ಮ ಉದ್ದೇಶ. ರಾಷ್ಟ್ರಕವಿ ಜಿಎಸ್‌ಎಸ್ ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ ಮುಖ ನೀನು, ನೋಡಬಹುದೆಂಬ ಒಂದೇ ಒಂದು ಆಸೆಯಿಂದ’’ ಎಂಬ ಮಾತನ್ನು ನೆನೆಯೋಣ. ಪಟಾಕಿ ಬಿಡಿ, ದೀಪ ಬೆಳಗಿಸಿ ಎಂಬ ಸಂದೇಶ ಸಾರೋಣ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.

 ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಶ್ರೀ ತಿರುಮಲ ನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಶ್ವಿನಿ ಗೋವರ್ಧನ್ ಚಾರಿಟಬಲ್ ಟ್ರಸ್ಟ್ ( ರಿ.) ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ 500 ಮಣ್ಣಿನ ದೀಪಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಈ ಬಾರಿ ಮಕ್ಕಳಿಗೆ ಪಟಾಕಿ ಬದಲಾಗಿ ಮಣ್ಣಿನ ಹಣತೆ ಬೆಳಗಿಸಲು ಮನವೊಲಿಸಿ. ಮಣ್ಣಿನ ಹಣತೆಯಿಂದ ಮನೆ ಮುಂದೆ ಅಲಂಕಾರ ಮಾಡಿಸಿ, ಸಂಭ್ರಮದಿಂದ ದೀಪಾವಳಿ ಆಚರಿಸಿ. ದೇಶಿ ಮಣ್ಣಿನ ದೀಪ ಖರೀದಿಸಿ ಕುಂಬಾರಿಕೆ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ನುಡಿದರು.

 ಈ ಹಬ್ಬ ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ನಮ್ಮ ಮನೆ ಮನದಲ್ಲಿ ಪಸರಿಸುತ್ತದೆ. ದೀಪಾವಳಿ ಅಂದರೆ “ದೀಪಗಳ ಸಾಲು” ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ. ಮಣ್ಣಿನ ಹಣತೆಯ ಬೆಳಕಿನ ಸೌಂದರ್ಯದ ಎದುರು ಸೂರ್ಯನು ನಾಚಿ ನೀರಾಗುತ್ತಾನೆ. ಮಣ್ಣನ್ನು ಜನರು ದೇವರೆಂದು ಭಾವಿಸುವುದರಿಂದ ಹೆಚ್ಚಾಗಿ ಮಣ್ಣಿನ ದೀಪಗಳನ್ನು ಹಚ್ಚುತ್ತಾರೆ ಎಂದರು.

 ಈ ಸಂದರ್ಭದಲ್ಲಿ ಹರಳಹಳ್ಳಿ ಗ್ರಾಮಸ್ಥರಿಗೆ ಕಸಾಪ ವತಿಯಿಂದ 500 ಮಣ್ಣಿನ ದೀಪಗಳನ್ನು ವಿತರಣೆ ಮಾಡಲಾಯಿತು.

 ಹರಳಹಳ್ಳಿ ಗ್ರಾಮದ ಹಿರಿಯ ಎಚ್.ಸೊಣ್ಣೇಗೌಡ, ಕೆ.ವಿ.ನಾರಾಯಣಸ್ವಾಮಿ, ಶಿಕ್ಷಕ ದೇವರಾಜ್, ಎಚ್.ಎಂ.ಶ್ರೀನಿವಾಸ್, ಎಚ್.ಎಂ.ಶ್ರೀನಾಥ್, ಎಚ್.ಆರ್.ಶಿವಕುಮಾರ್, ಎಚ್.ಪಿ.ಮನೋಜ್, ಪ್ರದೀಪ್, ಭುವನೇಶ್ವರಿ ಕನ್ನಡ ಯುವಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!