ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ 89 ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಶ್ರೀ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಏಳು ಆಮ್ಲಜನಕ ಸಾಂದ್ರಕ (ಆಕ್ಸಿಜನ್ ಕಾನ್ಸಂಟ್ರೇಟರ್) ಹಾಗೂ ತಾಲ್ಲೂಕಿನಾದ್ಯಂತ ಇರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು.
ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರದ್ದು ಅಪರೂಪದ ವ್ಯಕ್ತಿತ್ವ. ದೇಶದ ಹನ್ನೊಂದನೇ ಪ್ರಧಾನಿಯಾಗಿ ಎಚ್.ಡಿ.ದೇವೇಗೌಡ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಪ್ರತಿಯೊಬ್ಬರು ನೆನಪಿಡಬೇಕಾಗುತ್ತದೆ. ಬಡವರ ಏಳಿಗೆಯೇ ಅವರ ಗುರಿ. ಜನಪರ ಚಿಂತನೆ ಹಾಗೂ ರೈತರ ಬಗ್ಗೆ ಕಾಳಜಿಯೊಂದಿಗೆ ಸದಾ ತುಡಿಯುವ ಅವರ ಮಾನವೀಯ ಗುಣ ನಮಗೆಲ್ಲಾ ಪ್ರೇರಣೆ ಆಗಬೇಕು.
ಅಂತಹ ಮಹನೀಯರ ಹುಟ್ಟುಹಬ್ಬವನ್ನು ತಾಲ್ಲೂಕಿನ ಜನತೆಯ ಆರೋಗ್ಯ ಕಾಪಾಡುವುದು ಹಾಗೂ ಕೋವಿಡ್ 19 ರ ಮುಂಚೂಣಿ ಕಾರ್ಯಕರ್ತರಿಗೆ ನೆರವಾಗುವ ಮೂಲಕ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದೊಂದು ವರ್ಷದಿಂದ ಕೋವಿಡ್ 19 ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರಿಗೆ ಮನೋಸ್ಥೈರ್ಯ ತುಂಬುವುದು ಮತ್ತು ಕೊರೊನಾ ವಿರುದ್ದ ಹೋರಾಡಲು ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ಮಾತನಾಡಿ, ತಾಲ್ಲೂಕಿನ ಜನತೆ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ನಲುಗಿಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಟ್ರಸ್ಟಿನ ಅಧ್ಯಕ್ಷ ಬಿ.ಎನ್.ರವಿಕುಮಾರ್ ರ ನೇತೃತ್ವದಲ್ಲಿ 7 ಆಮ್ಲಜನಕ ಸಾಂದ್ರಕಗಳನ್ನು ನಗರದ ಆಸ್ಪತ್ರೆಗೆ ನೀಡುವ ಜೊತೆಗೆ 230 ಆರೋಗ್ಯ ಸಿಬ್ಬಂದಿ, 185 ಆಶಾ ಕಾರ್ಯಕರ್ತೆಯರು, 365 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 130 ಪೌರ ಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಗೆ 7 ಆಮ್ಲಜನಕ ಸಾಂದ್ರಕ (ಆಕ್ಸಿಜನ್ ಕಾನ್ಸಂಟ್ರೇಟರ್) ಹಾಗೂ ಕೊರೊನಾ ವಿರುದ್ಧ ಸೆಣಸುವ ಮುಂಚೂಣಿ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಿಸಿರುವುದು ನಿಜಕ್ಕೂ ಸಂತೋಷದ ವಿಷಯ, ಇದೇ ರೀತಿ ತಾಲ್ಲೂಕಿನಾದ್ಯಂತ ಇರುವ ದಾನಿಗಳು ಮುಂದೆ ಬಂದು ಕೋವಿಡ್ 19 ರ ಮುಂಚೂಣಿ ಕಾರ್ಯಕರ್ತರಿಗೆ ನೆರವಾಗಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಸ್ಪೂರ್ತಿದಾಯಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ವಾಣಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯರಾದ ಲಕ್ಷ್ಮಯ್ಯ, ವೆಂಕಟಸ್ವಾಮಿ, ಮುಖಂಡರಾದ ಎಚ್.ಜಿ.ಶಶಿಕುಮಾರ್, ಎಸ್.ಎಂ.ರಮೇಶ್, ಪಿ.ಕೆ.ಕಿಶನ್(ನಂದು), ರು ಹಾಜರಿದ್ದರು.