Sidlaghatta : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜೀತ ವಿಮುಕ್ತ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ದಿಬ್ಬೂರಹಳ್ಳಿಯಿಂದ ಶಿಡ್ಲಘಟ್ಟ ತಾಲ್ಲೂಕು ಕಚೇರಿವರೆಗೂ ಬುಧವಾರ ಪಾದಯಾತ್ರೆ ನಡೆಸಿದ ಜೀತ ವಿಮುಕ್ತರು, ತಾಲ್ಲೂಕು ಕಚೇರಿ ಆವರಣದಲ್ಲಿ ಅನಿರ್ಧಿಷ್ಟ ಧರಣಿಯನ್ನು ಆರಂಭಿಸಿದರು.
ಧರಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಜೀತ ವಿಮುಕ್ತ ಕರ್ನಾಟಕದ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಮಾತನಾಡಿ, ಜೀತ ವಿಮುಕ್ತರಿಗೆ ಭೂಮಿ, ವಸತಿ ಹಾಗೂ ಸಮಗ್ರ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿರುವೆವು. ಈ ಬೇಡಿಕೆಗಳನ್ನು ಈಡೇರಿಸಿಯೇ ತೀರುವ ಉದ್ದೇಶದಿಂದ ಅನಿರ್ಧಿಷ್ಟ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
“ಜೀತದಿಂದ ಬಿಡುಗಡೆ ಮಾಡಿ ಆದೇಶಿಸಿರುವ ಉಪ ವಿಭಾಗಾಧಿಕಾರಿಯವರು ತಕ್ಷಣ ಸ್ಥಳಕ್ಕೆ ಬಂದು ನಮ್ಮ ಹಕ್ಕೊತ್ತಾಯವನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕು. ಅದುವರೆಗೂ ಹೋರಾಟವನ್ನು ಕೈಬಿಡುವುದಿಲ್ಲ,” ಎಂದು ಅವರು ಎಚ್ಚರಿಸಿದರು. ರಾಜ್ಯದಲ್ಲಿ 7,500 ಜನರನ್ನು ಜೀತದಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಈವರೆಗೆ ಸರ್ಕಾರ ಯಾವುದೇ ಪುನರ್ವಸತಿ ನೀಡಿಲ್ಲವೆಂದು ಆರೋಪಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 432 ಜನರನ್ನು ಜೀತದಿಂದ ಬಿಡುಗಡೆ ಮಾಡಲಾಗಿದೆಯಾದರೂ, ಪಾರ್ಕಸ್ ನಿಧಿ ಮತ್ತು ಮಾಶಾಸನ ಹೊರತುಪಡಿಸಿ, ಕಾನೂನುಬದ್ಧವಾಗಿ ಯಾವುದೇ ಸೌಲಭ್ಯಗಳು ಒದಗಿಸಿಲ್ಲ. ಈ ನಿರ್ಲಕ್ಷ್ಯದಿಂದ ಜೀತ ವಿಮುಕ್ತರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ. ಜೀತ ವಿಮುಕ್ತರಿಗೆ ಪುನರ್ವಸತಿ ಕಲ್ಪಿಸದೆ, ಅವರ ಪುನರ್ವಾಸದ ಬಗ್ಗೆ ಅಸಡ್ಡೆ ತೋರುವ ಸರ್ಕಾರ ಮತ್ತು ಜಿಲ್ಲಾಡಳಿತವೇ ಇದರ ಹೊಣೆಯಾಗಿರಬೇಕು ಎಂದು ಹೇಳಿದರು.
“ಜೀತದಿಂದ ವಿಮುಕ್ತರಾದವರ ಪುನರ್ವಸತಿ ಕಲ್ಪಿಸದೆ ಅವರನ್ನು ಅತಂತ್ರ ಸ್ಥಿತಿಗೆ ತಳ್ಳಲಾಗಿದೆ. ಅದೇ ಸಮಯದಲ್ಲಿ, ಜೀತಕ್ಕೆ ಇಟ್ಟುಕೊಂಡವರ ವಿರುದ್ಧ ಕೇಸು ದಾಖಲಿಸುವ ಕಾನೂನನ್ನು ಕೂಡ ಕೈಬಿಡಬೇಕು. ಜೀತದಿಂದ ಬಿಡುಗಡೆಯಾದ ಪ್ರತಿಯೊಬ್ಬರಿಗೂ ಕನಿಷ್ಠ 2 ಎಕರೆ ಭೂಮಿ ನೀಡಬೇಕು,” ಎಂದು ತಮ್ಮ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.
ತಾಲ್ಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಧರಣಿ ಮುಂದುವರಿಸಲಾಗಿದ್ದು, ಜೀವಿಕ ಒಕ್ಕೂಟದ ಅಧ್ಯಕ್ಷ ಮತ್ತು ರಾಜ್ಯ ಗೌರವಾಧ್ಯಕ್ಷ ಗೊಲ್ಲಹಳ್ಳಿ ನರಸಿಂಹಪ್ಪ, ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ಮುನಿರಾಜು, ಮುನಿಕೃಷ್ಣಪ್ಪ, ಗಂಗಪ್ಪ, ಆಂಜಿನಪ್ಪ, ನಾರಾಯಣಪ್ಪ, ಕೃಷ್ಣಪ್ಪ ಹಾಗೂ ಅನಿಲ್ ಕುಮಾರ್ ಪ್ರತಿಭಟನೆಯನ್ನು ನೇತೃತ್ವ ವಹಿಸಿದ್ದರು.