19.1 C
Sidlaghatta
Sunday, November 9, 2025

ಶಿಡ್ಲಘಟ್ಟ ಸಮಗ್ರ ಅಭಿವೃದ್ಧಿಯ ದಾರಿಯಲ್ಲಿ : ಸಚಿವ ಡಾ. ಎಂ.ಸಿ. ಸುಧಾಕರ್

- Advertisement -
- Advertisement -

Sidlaghatta, chikkaballapur : ಶಿಡ್ಲಘಟ್ಟ ನಗರದ ಇತಿಹಾಸ ಪ್ರಸಿದ್ಧ ಶ್ರೀ ಶೋಮೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿ, ಶಿಡ್ಲಘಟ್ಟವನ್ನು ಸಮಗ್ರ ಅಭಿವೃದ್ಧಿಯ ದಾರಿಯಲ್ಲಿ ಕೊಂಡೊಯ್ಯುವ ಭರವಸೆ ನೀಡಿದರು.

ದೇವಾಲಯದ ಪುನರ್‌ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, “ಭಕ್ತರ ಸಹಕಾರದಿಂದ ಎ ನಾಗರಾಜ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಪುಣ್ಯಕಾರ್ಯ ನಡೆಯುತ್ತಿದೆ. ಶಿಡ್ಲಘಟ್ಟದ ಜನರ ಉತ್ಸಾಹ ಶ್ಲಾಘನೀಯ” ಎಂದರು.

ಮಾನ್ಯ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಶಿಡ್ಲಘಟ್ಟಕ್ಕೆ ಭೇಟಿ ನೀಡಲಿದ್ದು, ತಾಲ್ಲೂಕಿನ ಹಲವು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. “ಬಹುನಿರೀಕ್ಷಿತ ಹೈಟೆಕ್ ರೇಷ್ಮೆ ಮಾರುಕಟ್ಟೆ ಯೋಜನೆಗೆ 200 ಕೋಟಿ ರೂಪಾಯಿ ಮಂಜೂರಾಗಿದ್ದು, ಜೊತೆಗೆ ರಾಮಸಮುದ್ರದಿಂದ ಶಿಡ್ಲಘಟ್ಟಕ್ಕೆ ಶುದ್ಧ ಕುಡಿಯುವ ನೀರು, 35 ಕೋಟಿ ರೂ.ಗಳ ಒಳಚರಂಡಿ ಯೋಜನೆ, ಅಮರಾವತಿಯಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡ ಉದ್ಘಾಟನೆ ಮತ್ತು ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ,” ಎಂದು ಹೇಳಿದರು.

ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಜಾರಿಗೊಳಿಸಿದ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಗಳು ಅಂತರ್ಜಲ ವೃದ್ಧಿಗೆ ಮಹತ್ವದ ವಹಿಸುತ್ತವೆ. “ಈ ಯೋಜನೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ 45 ಕೆರೆಗಳು ಮತ್ತು ಚಿಂತಾಮಣಿಯ 119 ಕೆರೆಗಳಿಗೆ ನೀರು ಹರಿಸುವ ಕೆಲಸ ಪ್ರಾರಂಭವಾಗಿದೆ. ವೃಷಭಾವತಿ ನದಿಯ ಸಂಸ್ಕರಿಸಿದ ನೀರನ್ನು ದೇವನಹಳ್ಳಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ಪ್ರದೇಶಗಳಿಗೆ ಹರಿಸುವ ಯೋಜನೆಗೂ ಅನುಮೋದನೆ ದೊರೆತಿದೆ,” ಎಂದು ಸಚಿವರು ತಿಳಿಸಿದರು.

ಅವರು ಪ್ರತಿಪಕ್ಷದ ಟೀಕೆಗಳಿಗೆ ಉತ್ತರಿಸುತ್ತಾ, “ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುವ ಆರೋಪಗಳ ನಡುವೆಯೂ, ಮುಖ್ಯಮಂತ್ರಿಗಳು ಶಿಡ್ಲಘಟ್ಟದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಇದರಿಂದ ರಾಜ್ಯದ ಜನತೆಗೆ ಅಭಿವೃದ್ಧಿಯ ನಿಜವಾದ ದೃಷ್ಟಿಕೋಣ ಸ್ಪಷ್ಟವಾಗಲಿದೆ,” ಎಂದರು.

ಎತ್ತಿನಹೋಳೆ ಯೋಜನೆ ಕುರಿತು ಮಾತನಾಡಿದ ಸಚಿವರು, “ಯೋಜನೆಯ ಪ್ರಗತಿ ಇದೀಗ ವೇಗ ಪಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಯತ್ನದಿಂದ ರೈತರ ಸಹಕಾರ ಪಡೆದು ಪೈಪ್‌ಲೈನ್ ಅಳವಡಿಕೆ ನಡೆಯುತ್ತಿದೆ. ಮುಂದಿನ 2.5 ವರ್ಷಗಳಲ್ಲಿ ಶುದ್ಧೀಕರಣ ಘಟಕ ಸ್ಥಾಪನೆ ಸೇರಿ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶವಿದೆ,” ಎಂದರು.

ಅಜ್ಜವಾರ ಕೆರೆ ಚೆಕ್‌ಡ್ಯಾಂ ಬಗ್ಗೆ ಉಲ್ಲೇಖಿಸಿ, “ಈ ವಿಷಯ ನಮ್ಮ ಗಮನಕ್ಕೆ ಬಂದಿರಲಿಲ್ಲ. ನೀವು ವರದಿ ನೀಡಿ, ಸಣ್ಣ ನೀರಾವರಿ ಇಲಾಖೆಯ ಮೂಲಕ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿಗೆ ನ್ಯಾಯ ದೊರೆತಿಲ್ಲವೆಂಬ ಆರೋಪಕ್ಕೆ ಉತ್ತರಿಸಿದ ಅವರು, ಪ್ರಶಸ್ತಿ ಆಯ್ಕೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ವಹಿಸಲಾಗಿತ್ತು, ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗಗನ ಸಿಂಧೂ, ಶ್ರೀ ಸೋಮೇಶ್ವರ ದೇವಾಲಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎ ನಾಗರಾಜ್, ಜಾತವರ ಸುರೇಶ್, ವೈದ್ಯ ಸತ್ಯನಾರಾಯಣ ರಾವ್, ರೂಪಸಿ ರಮೇಶ್, ಭಕ್ತಾದಿಗಳು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

Namma Sidlaghatta Telegram channel

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!