22.1 C
Sidlaghatta
Tuesday, October 8, 2024

ಶಿಡ್ಲಘಟ್ಟದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ

- Advertisement -
- Advertisement -

Belluti, Sidlaghatta : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (Shri Kshethra Dharmasthala Rural Development Project – SKDRDP) ಮುಖ್ಯ ಉದ್ದೇಶ ಹೃದಯ ಬಡತನ ಮತ್ತು ಆರ್ಥಿಕ ಬಡತನ ನಿವಾರಣೆ ಮಾಡುವುದಾಗಿದೆ. ಅನುಕಂಪಕ್ಕಿಂತ ಸಹಾಯ ಮುಖ್ಯ. ಪ್ರೀತಿ, ದಯೆ, ನಿಷ್ಕಲ್ಮಶ ಹೃದಯದಿಂದ ಪರೋಪಕಾರ ಮಾಡುವ ಬಗ್ಗೆ ಎಲ್ಲಾ ಧರ್ಮಗಳಲ್ಲೂ ಹೇಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Dr. D. Veerendra Heggade) ತಿಳಿಸಿದರು.

 ತಾಲ್ಲೂಕಿನ ಬೆಳ್ಳೂಟಿ ಗೇಟ್ ನ ಎಸ್.ಎಲ್.ವಿ.ಕಲ್ಯಾಣ ಮಂಟಪದ ಹೊರಾಂಗಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸ್ವ-ಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 “ಸ್ವ-ಸಹಾಯ ಅಂದರೆ ನನಗೆ ನಾವೇ ಸಹಾಯ ಮಾಡಿಕೊಳ್ಳುವುದು. ಯಾರೊಬ್ಬರೂ ದೇಹಿ ಅನ್ನಬೇಡಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಮ್ಮ ಕುಟುಂಬವನ್ನು ರಕ್ಷಿಸುತ್ತೇವೆ ಎಂಬ ವಿಶ್ವಾಸದಿಂದ ಮುನ್ನಡೆದಾಗ ಯಶಸ್ಸು ನಿಮ್ಮದಾಗುತ್ತದೆ. ಧಾರ್ಮಿಕತೆ ಇರುವಲ್ಲಿ ಶಿಸ್ತು ಮತ್ತು ನ್ಯಾಯಬದ್ಧತೆ ಇರುತ್ತದೆ. ಕುಟುಂಬವನ್ನು ರಕ್ಷಿಸುವ ಧೈರ್ಯವನ್ನು ಮಹಿಳೆಯರಲ್ಲಿ ಮೂಡಿಸಿರುವುದರಿಂದ ದೊಡ್ಡ ಪರಿವರ್ತನೆ ಆಗಿದೆ. ಜಾತಿ, ಮತ, ಪಂಥ, ಅಂತಸ್ತು ಮರೆತು ರೂಪಿಸಿರುವ ಹೆಣ್ಣುಮಕ್ಕಳ ಸ್ವ-ಸಹಾಯ ಸಂಘಗಳಿಂದ ಸಬಲೀಕರಣ ಸಾಧ್ಯವಾಗಿದೆ” ಎಂದರು.

 ಕೇವಲ 10 ಅಥವಾ 20 ರೂ ಗಳೆಂದು ಕಡೆಗಣಿಸಬಾರದು. ಆ ರೀತಿಯಾಗಿ ಸ್ವ-ಸಹಾಯ ಸಂಘದ ಸದಸ್ಯರು ಕೂಡಿಟ್ಟ ಹಣವೀಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 43 ಕೋಟಿ ರೂ ಉಳಿತಾಯವಾಗಿದೆ. ಸಂಘದಿಂದ ಹಣ ಪಡೆದವರ ಯೋಚನೆಯು ಯೋಜನೆಯಾಗಿದೆ. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ. ಇರುವಷ್ಟೇ ಭೂಮಿಯಲ್ಲಿ ಹೆಚ್ಚು ಆದಾಯ ಪಡೆಯಲು ಗ್ರಾಮಾಭಿವೃದ್ಧಿ ಯೋಜನೆ ನೆರವಾಗುತ್ತದೆ ಎಂದು ಹೇಳಿದರು.

 ಕರ್ಮಯೋಗಕ್ಕಿಂತಲೂ ದೊಡ್ಡದಾದ ಯೋಗ ಅಥವಾ ಧ್ಯಾನವಿಲ್ಲ. ಕಾಯಕವೇ ದೊಡ್ಡದು. ನಮ್ಮ ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆ, ಮಕ್ಕಳ, ರೈತರ, ವಿದ್ಯಾರ್ಥಿ ಹಾಗೂ ಯುವಜನರ ಸಮಗ್ರ ಅಭಿವೃದ್ದಿಗೆ ಪೂರಕವಾದ ಅನೇಕ ಚಟುವಟಿಕೆಗಳನ್ನು ಕೈಗೊಂಡಿದ್ದು ಇದೆಲ್ಲವೂ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.

 ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಅಕ್ಷರ, ಅನ್ನ, ಆರೋಗ್ಯ ದಾಸೋಹದ ಜೊತೆಗೆ ಕೆರೆ ಹೂಳೆತ್ತುವ ಕಾರ್ಯಕ್ರಮಗಳು, ಪರಿಸರ ರಕ್ಷಣೆ ಸೇರಿದಂತೆ ಎಲ್ಲ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ವೀರೇಂದ್ರ ಹೆಗ್ಗಡೆ ಅವರು ಮಾತನಾಡುವ ದೇವರಾಗಿ ಪ್ರಸಿದ್ಧಿ ಪಡೆದಿದ್ದಾರೆ. ನಾಡಿನ ಲಕ್ಷಾಂತರ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಸಹಕಾರಿಯಾಗಿದ್ದು, ಬಡವರ ಪಾಲಿನ ಕಲ್ಪವೃಕ್ಷವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

 ವಿರೇಂದ್ರ ಹೆಗ್ಗಡೆ ಅವರ ಪ್ರತಿ ಕಾರ್ಯದಲ್ಲಿ ಅಂತಃಕರಣ ಹೊಂದಿದ್ದು, ಮಹಿಳೆಯರಿಗೆ ಆರ್ಥಿಕೆ ಚೈತನ್ಯ ತುಂಬುವ ಮಹತ್ತರ ಕೆಲಸಗಳನ್ನು ಮಾಡುತ್ತಿದ್ದಾರೆ.  ಕಳೆದ 60 ವರ್ಷದಿಂದ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಅವರ ಜನಪರ ಕಾಳಜಿಗೆ ನಿದರ್ಶನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆಗ್ಗಡೆ ಅವರಂತಹ ಮಹನೀಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಆ ಸ್ಥಾನದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

ಸಬಯರನ್ನಾಗಿಸುತ್ತಿರುವ ಟ್ರಸ್ಟ್ :

ಅಬಲೆಯರನ್ನು ಸಬಲೆಯರನ್ನಾಗಿ ಮಾಡುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನಿಂದ ನಡೆಯುತ್ತಿದೆ. ಲಕ್ಷಾಂತರ ಮಹಿಳೆಯರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಟ್ರಸ್ಟ್ ಕಾರಣವಾಗಿದೆ. 1985 ರಿಂದ ಈವರೆಗೆ 85 ಸಾವಿರ ಕೋಟಿ ರೂಪಾಯಿ ವಹಿವಾಟು ಟ್ರಸ್ಟ್ ನಿಂದ ನಡೆದಿದೆ. ಈಗ 16.5 ಸಾವಿರ ಕೋಟಿ ಸಾಲ ಮಹಿಳೆಯರ ಮೇಲಿದೆ. ಇಷ್ಟು ವಹಿವಾಟು ನಡೆದರೂ 2.19 ಕೋಟಿ ರೂಪಾಯಿ ಮಾತ್ರ ಸುಸ್ತಿಯಾಗಿರುವುದು ಮಹಿಳೆಯರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಹೆಣ್ಣು ಕಲಿತರೆ ಶಾಲೆ ತೆರೆದಂತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ಶ್ರೀಗಳು ವಿಶೇಷ ಯೋಜನೆ ರೂಪಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸದಸ್ಯರು ಟ್ರಸ್ಟ್ ನಲ್ಲಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 3.300 ಸಂಘಗಳಿವೆ. 50 ಸಾವಿರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

 ಲೋಕಸಭಾ ಸದಸ್ಯ ಮುನಿಸ್ವಾಮಿ ಮಾತನಾಡಿ, ಮಹಿಳೆಯರು ತಮ್ಮ ತಮ್ಮ ಗ್ರಾಮಗಳಲ್ಲಿ ಒಗ್ಗೂಡಿ ಅನಧಿಕೃತ ಮದ್ಯಮಾರಾಟಕ್ಕೆ ತಡೆಯೊಡ್ಡಬೇಕು. ದುಶ್ಚಟವೆಂಬುದು ನೀರಿನ ಪಾತ್ರೆಯಲ್ಲಿ ತೂತು ಬಿದ್ದಂತೆ. ನಿಮ್ಮ ಶ್ರಮದ ದುಡಿಮೆ ಸೋರಿಹೋಗುತ್ತದೆ ಎಂದರು.

 ಮಾಸಾಶನ, ಅಂಗವಿಕಲರಿಗೆ ವೀಲ್ ಚೇರ್, ಸಿಡ್ಬಿ ಪ್ರಗತಿ ನಿಧಿ, ಸುಜ್ಞಾನನಿಧಿ ಶಿಷ್ಯವೇತನ, ವಾತ್ಸಲ್ಯ ಮನೆ, ಇ-ಶ್ರಮ್ ಕಾರ್ಡ್, ದೇವಸ್ಥಾನಕ್ಕೆ ಸಹಾಯಧನ, ಆರೋಗ್ಯರಕ್ಷಾ ವಿಮೆಯ ಹಣ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಾನಾ ಸವಲತ್ತುಗಳನ್ನು ವಿತರಿಸಲಾಯಿತು.

 ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್, ಶಾಸಕ ವಿ. ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಶ್ರದ್ಧಾ ಅಮಿತ್, ತಹಶೀಲ್ದಾರ್ ಬಿ.ಎಸ್.ರಾಜೀವ್, ಮಾಜಿ ಶಾಸಕರಾದ ಪಿಳ್ಳ ಮುನಿಸ್ವಾಮಪ್ಪ, ರಾಜಣ್ಣ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಪಿಳ್ಳಮುನಿಶಾಮಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ ಅನಿಲ್ ಕುಮಾರ್ ಹಾಜರಿದ್ದರು.

ಧರ್ಮಸ್ಥಳಕ್ಕೆ ತರಕಾರಿ

 ಧರ್ಮಸ್ಥಳದಲ್ಲಿ ನಡೆಸುವ ಅನ್ನದಾನಕ್ಕೆ ಇದುವರೆವಿಗೂ ತರಕಾರಿಗಳನ್ನು ಕೊಂಡಿದ್ದೇ ಇಲ್ಲ. ಬಹುತೇಕ ಅತ್ಯುತ್ತಮ ತರಕಾರಿ ಚಿಕ್ಕಬಳ್ಳಾಪುರ ಮತ್ತು ಕೋಲಾರದ ರೈತರು ಕಳುಹಿಸುವರು. ಆಧುನಿಕ ಕೃಷಿಗೆ ಒತ್ತು ನೀಡಿ “ಯಂತ್ರಧಾರಾ” ಯೋಜನೆಯನ್ನು ರೂಪಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.

ಮೆರವಣಿಗೆ ಮತ್ತು ಕೆರೆ ಹಸ್ತಾಂತರ

 ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸಗಳನ್ನು ಹೊತ್ತು ಸ್ವಾಗತ ಕೋರಿದರು. ವಿವಿಧ  ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ರಸ್ತೆಯ ಅಕ್ಕಪಕ್ಕದ ಅಂಗಡಿ, ಮನೆಗಳಲ್ಲಿನ ಜನರು ಹೊರಗಡೆ ಬಂದು ಮೆರವಣಿಗೆಯ ಉದ್ದಕ್ಕೂ ಸಾಗಿ ಬಂದ ಬೆಳ್ಳಿ ರಥದಲ್ಲಿ ಕುಳಿತಿದ್ದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ನೋಡಿ ನಮಸ್ಕರಿಸಿ ಭಕ್ತಿ ಭಾವದಿಂದ ರಥಕ್ಕೆ ಪುಷ್ಪ ನಮನ ಸಲ್ಲಿಸಿದರು.

 ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿರುವ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು. ಬೆಳ್ಳೂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗಿಡವನ್ನು ನೆಟ್ಟು, ಶಾಲಾ ಮಕ್ಕಳೊಂದಿಗೆ ಸಂವಾದಿಸಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!