Sidlaghatta : ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಬಗರ್ ಹುಕುಂ ಸಾಗುವಳಿಯಲ್ಲಿ ಕೃಷಿ ಜಮೀನು ಹಾಗೂ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ನಗರದ ತಾಲ್ಲೂಕು ಕಚೇರಿ ಮುಂಭಾಗ ಹನ್ನೊಂದು ದಿನಗಳಿಂದ ಅನಿರ್ಧಿಷ್ಟ ಧರಣಿ ನಡೆಸಿತ್ತು. ಗುರುವಾರ, ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಧರಣಿಗೆ ಅಂತ್ಯಕಾಣಿಸಲಾಯಿತು.
ದಲಿತರ ಬಡಾವಣೆಗಳಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ, ಹಾಗೂ ಸ್ವಚ್ಚತೆ ಯಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಬದುಕುತ್ತಿದ್ದಾಗ ಕೃಷಿ ಭೂಮಿ ಮತ್ತು ಮನೆ, ಸತ್ತ ಬಳಿಕ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ಜಾಗ ಒದಗಿಸಬೇಕೆಂದು ಒತ್ತಾಯಿಸಿ, ನಗರದ ತಾಲ್ಲೂಕು ಕಚೇರಿ ಎದುರು ಜನವರಿ 20 ರಿಂದ ಧರಣಿ ನಡೆಯುತ್ತಿತ್ತು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀಡಿದ ಭರವಸೆಗಳ ಹಿನ್ನೆಲೆಯಲ್ಲಿ, ದಸಂಸ ಸಂಘಟನೆಯ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಧರಣಿಯನ್ನು ಸ್ಥಗಿತಗೊಳಿಸಿದರು.
ತಹಸೀಲ್ದಾರ್ ಬಿ.ಎನ್.ಸ್ವಾಮಿ ಮನವಿ ಸ್ವೀಕರಿಸಿ, ಧರಣಿ ನಿರತರ ಬೇಡಿಕೆಗಳನ್ನು ಆದ್ಯತೆ ನೀಡಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ತೀರ್ಮಾನಗೊಳ್ಳಬೇಕಾದ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಧರಣಿಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ, ತಾಲ್ಲೂಕು ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್, ಹುಜಗೂರು ವೆಂಕಟೇಶ್, ಈ ತಿಮ್ಮಸಂದ್ರ ಗಂಗಾಧರ್, ತಾಲ್ಲೂಕು ಮಹಿಳಾ ಸಂಚಾಲಕಿ ಶಶಿಕಲಾ ನರಸಿಂಹರಾಜು, ದಲಿತ ಮುಖಂಡರಾದ ದ್ಯಾವಕೃಷ್ಣಪ್ಪ ಮತ್ತು ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.