Sidlaghatta : ಶಿಡ್ಲಘಟ್ಟ ನಗರದ ಕಾಮಾಟಿಗರ ಪೇಟೆಯಲ್ಲಿರುವ ಗ್ರಾಮದೇವತೆ ಗಂಗಮ್ಮದೇವಿ (Gangamma Devi) ಹಾಗೂ ಸಿದ್ದಾರ್ಥನಗರದ ಗಂಗಾಭವಾನಿ ದೇವಿಯ (Gangabhavani Devi) ಜಾತ್ರಾ (Jathre) ಮಹೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರೆಯ ಅಂಗವಾಗಿ ಗ್ರಾಮದೇವತೆ ಶ್ರೀಗಂಗಮ್ಮ ದೇವಿ ಹಾಗೂ ಸಿದ್ದಾರ್ಥನಗರದ ಗಂಗಾಭವಾನಿ ದೇವಾಲಯಗಳನ್ನು ಬಣ್ಣದಿಂದ ಹಾಗೂ ನಾನಾ ವಿಧದ ಹೂಗಳಿಂದ ಸಿಂಗಾರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾವು ಬೇವು ಬಾಳೆ ದಿಂಡಿನ ತಳಿರು ತೋರಣಗಳಿಂದ ದೇವಾಲಯಗಳು ಕಂಗೊಳಿಸುತ್ತಿತ್ತು.
ಸೋಮವಾರ ಗಂಡು ದೇವರುಗಳಿಗೆ ದೀಪೋತ್ಸವವನ್ನು ನೆರವೇರಿಸಿದ ಮಹಿಳೆಯರು, ದೇವಾಲಯಗಳಲ್ಲಿ ಗಂಗಾ ಪೂಜೆಯೊಂದಿಗೆ ಜಾತ್ರಾ ಮಹೋತ್ಸವದ ಪೂಜೆಯನ್ನು ಆರಂಭಿಸಿದ್ದರು. ನಾನಾ ಹೋಮ ಹವನ ಹಾಗೂ ವಿದವಿಧದ ಪೂಜೆಗಳನ್ನು ನೆರವೇರಿದ್ದು ಮಂಗಳವಾರ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ನಗರದಲ್ಲಿ ಹೆಣ್ಣುಮಕ್ಕಳು, ಮುತ್ತೈದೆಯರು ಅಲಂಕೃತರಾಗಿ ಅಂದ ಚೆಂದದ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಆಗಮಿಸಿ ದೇವತೆಗಳಿಗೆ ಆರತಿ ಬೆಳಗಿದರು.