Kannamangala, sidlaghatta : ಇತ್ತೀಚಿನ ದಿನಗಳಲ್ಲಿ ಯುವಕರು ದೈಹಿಕ ಕಸರತ್ತು ಮತ್ತು ಬಯಲಾಟಗಳಿಂದ ದೂರವಾಗುತ್ತಿರುವುದು ಗಂಭೀರ ವಿಚಾರ ಎಂದು ಜೆಡಿಎಸ್ ಮುಖಂಡ ಬಿ.ಎನ್. ಸಚಿನ್ ಅಭಿಪ್ರಾಯಪಟ್ಟರು.
ತಾಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಮಂಗಲ ಗ್ರಾಮ ಹೊರವಲಯದಲ್ಲಿ ಶನಿವಾರ ಪ್ರಾರಂಭವಾದ ಎರಡು ದಿನಗಳ ಸುಭಾಷ್ ಕ್ರಿಕೆಟ್ ಟೂರ್ನಿಯ ರಾಜ್ಯ ಮಟ್ಟದ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
“ಯುವಕರು ಹೊಲಗದ್ದೆಗಳಲ್ಲಿ ದುಡಿಯುವುದು ಕಡಿಮೆ ಮಾಡಿದ್ದು, ಶಾಲಾ-ಕಾಲೇಜುಗಳಲ್ಲೂ ದೈಹಿಕ ಶ್ರಮದ ಕೊರತೆಯಾಗಿದೆ. ಜೊತೆಗೆ, ಸಾಮಾಜಿಕ ಮಾಧ್ಯಮಗಳ ಅಪಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ” ಎಂದು ಸಚಿನ್ ಅವರು ಹೇಳಿದರು. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಸೇರಿದಂತೆ ದೈಹಿಕ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಎಲ್ಲರೂ ಗಮನ ಹರಿಸಬೇಕಿದೆ ಎಂದರು.
“ಯುವಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವಾಗ ಮಾತ್ರ ಉತ್ತಮ ಚಿಂತನೆ ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯ. ಇದರ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಅವರು ನುಡಿದರು. ಕನ್ನಮಂಗಲದ ಯುವಕರು ಕ್ರಿಕೆಟ್ ಟೂರ್ನಿಯ ಮೂಲಕ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ ಎಂದು ಶ್ಲಾಘಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, “ಕ್ರೀಡೆ, ಸಂಗೀತ ಮತ್ತು ಸಿನಿಮಾಗಳಷ್ಟೆ ಜನರನ್ನು ಜಾತಿ, ಧರ್ಮ, ಬಡ-ಶ್ರೀಮಂತ ಬೇಧವಿಲ್ಲದೆ ಒಗ್ಗೂಡಿಸುವ ಶಕ್ತಿ ಹೊಂದಿವೆ” ಎಂದರು. ಬಯಲು ಸೀಮೆಯ ರೈತರ ಮಕ್ಕಳು ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹುಜಗೂರು ರಾಮಯ್ಯ, ರೈತ ಸಂಘದ ತಾದೂರು ಮಂಜುನಾಥ್, ವೀರಾಪುರ ಮುನಿನಂಜಪ್ಪ, ಬಸವರಾಜ್, ಕೆಂಪಣ್ಣ, ರಮೇಶ್, ಶ್ರೀನಿವಾಸರಾವ್, ವಸಂತಕುಮಾರ್, ಕಿಷನ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.