Sidlaghatta, chikkaballapur : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಐತಿಹಾಸಿಕ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಜೀರ್ಣೋದ್ಧಾರ ಹಾಗೂ ವಿಮಾನಗೋಪುರದ ಮಹಾ ಸಂಪ್ರೋಕ್ಷಣಾ ಪ್ರತಿಷ್ಠಾಪನಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು. ಶನಿವಾರದಿಂದ ಆರಂಭವಾದ ಈ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರದವರೆಗೆ ನಡೆಯಿತು.
ಶನಿವಾರದಂದು ಗಣೇಶಪೂಜೆ, ಕಂಕಣಬಂಧನ, ಸ್ವಸ್ತಿ ಪುಣ್ಯಾಹ, ದೇವನಾಂದಿ ಕಲಶ ಪ್ರತಿಷ್ಠೆ ಸೇರಿದಂತೆ ಪೂಜಾ ವಿಧಿವಿಧಾನಗಳು ನಡೆಯಿತು. ಭಾನುವಾರ ಅಧಿವಾಸ ಹೋಮ, ತತ್ವ ಹವನ, ನವಗ್ರಹಹವನ, ಗಣೇಶ ಹವನ ಹಾಗೂ ಕಲಾ ನಿದರ್ಶನಗಳ ಮೂಲಕ ದೇವಾಲಯದ ಆವರಣದಲ್ಲಿ ಧಾರ್ಮಿಕ ವಾತಾವರಣ ಕಂಗೊಳಿಸುತ್ತಿತ್ತು.
ಮೂರನೇ ದಿನವಾದ ಸೋಮವಾರ, ಸರ್ವದೇವರ ಮಹಾಭಿಷೇಕ, ನೇತ್ರೋನ್ಮೀಲನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು. ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯದ ಪುನರ್‌ನಿರ್ಮಾಣ ಮತ್ತು ಗೋಪುರ ಸಂಪ್ರೋಕ್ಷಣೆಯು ನಗರದಲ್ಲಿ ಭಕ್ತಿ ಹಾಗೂ ಹರ್ಷದ ವಾತಾವರಣವನ್ನು ಸೃಷ್ಟಿಸಿತು.
ಕಾರ್ಯಕ್ರಮದಲ್ಲಿ ಸಂಸದ ಎಂ. ಮಲ್ಲೇಶಬಾಬು, ಶಾಸಕ ಬಿ.ಎನ್. ರವಿಕುಮಾರ್, ಕಾಂಗ್ರೆಸ್ ಮುಖಂಡರು ಡಾ. ಎಂ. ಶಶಿಧರ್, ಆಂಜಿನಪ್ಪ (ಪುಟ್ಟು), ಬಿ.ವಿ. ರಾಜೀವ್‌ಗೌಡ, ತಹಶೀಲ್ದಾರ್ ಗಗನಸಿಂಧೂ ಹಾಗೂ ಶ್ರೀಸೋಮೇಶ್ವರಸ್ವಾಮಿ ದೇವಾಲಯಾಭಿವೃದ್ದಿ ಸಮಿತಿ ಅಧ್ಯಕ್ಷ ಎ. ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366









