ಅದರ ಗಾತ್ರ, ಆಕಾರ, ತೂಕಗಳೂ ಭಿನ್ನ, ಹಾಗೆಯೇ ಅದರ ಕಾರ್ಯವ್ಯಾಪ್ತಿಯೂ ಉಳಿದವುಗಳಿಗಿಂತ ಭಿನ್ನವೇ. ಅದೇ ‘ನವಯುಗದ ದೂರದರ್ಶಕಗಳು’ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ‘ಜೇಮ್ಸ್‍ವೆಬ್’ ದೂರದರ್ಶಕ.
ದೂರದರ್ಶಕಗಳಿಂದಾಗಿ ಮಾನವನಿಗೆ ಬ್ರಹ್ಮಾಂಡದ ಅಗಾಧತೆಯನ್ನು ಗ್ರಹಿಸಲು ಸಾಧ್ಯವಾಗಿದೆ. ನಾಲ್ಕುನೂರು ವರ್ಷಗಳ ಹಿಂದೆ ಒರಟು ಒರಟಾಗಿದ್ದ ದೂರದರ್ಶಕಗಳು ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನದ ಮೂಸೆಯಲ್ಲಿ ರೂಪಾಂತರ ಹೊಂದುತ್ತ ಬಂದಿವೆ. ಬಾಹ್ಯಾಕಾಶದ ವಿವಿಧ ಪ್ರದೇಶಗಳನ್ನು ಅಧ್ಯಯನ ಮಾಡಲು ಇಂದು ಅನೇಕ ರೀತಿಯ ದೂರದರ್ಶಕಗಳು ಕೆಲಸ ಮಾಡುತ್ತಿವೆ. ಬಾಹ್ಯ ಆಕಾಶದಲ್ಲಿನ ವಸ್ತುಗಳು ಸೂಸುವ ವಿದ್ಯುತ್ಕಾಂತೀಯ ಕಿರಣಗಳನ್ನು ಸೆರೆ ಹಿಡಿಯುವ ಕೆಲಸ ಈ ದರ್ಶಕಗಳದ್ದು. ವಿದ್ಯುತ್ಕಾಂತೀಯ ರೋಹಿತಪಟ್ಟಿ ರೇಡಿಯೋ, ಮೈಕ್ರೋ, ಅವಗೆಂಪು, ದೃಗ್ಗೋಚರ, ಅತಿನೇರಳೆ, ಎಕ್ಸ್ ರೇ, ಹಾಗೂ ಗಾಮಾ ಕಿರಣಗಳನ್ನು ಒಳಗೊಂಡಿರುತ್ತದೆಯಷ್ಟೆ? ಅವಶ್ಯಕತೆಗೆ ಅನುಗುಣವಾಗಿ ಪ್ರತ್ಯೇಕ ಕಿರಣಗಳನ್ನು ಗುರುತಿಸುವಂತೆ ಬೇರೆ ಬೇರೆ ದೂರದರ್ಶಕಗಳು ನಿರ್ಮಾಣಗೊಂಡಿವೆÉ. ಆ ಕಿರಣಗಳ ಮೂಲವನ್ನು ಪತ್ತೆ ಹಚ್ಚಿ ಅವು ಎಷ್ಟು ದೂರದಲ್ಲಿವೆ, ನಕ್ಷತ್ರವೇ, ಗೆಲಾಕ್ಸಿಯೇ ಇತ್ಯಾದಿ ವಿವರಗಳನ್ನು ಮುಂದಿನ ಸಂಶೋಧನೆಗಳು ತಿಳಿಸುತ್ತವೆ.
ಈಗಿರುವ ಹಲವಾರು ದೂರದರ್ಶಕಗಳಲ್ಲಿ ಭೂಮಿಯ ಮೇಲೆ ಎತ್ತರದ ಪ್ರದೇಶಗಳಲ್ಲಿ ಆಗಸಕ್ಕೆ ಮುಖ ಮಾಡಿರುವಂಥವು ಕೆಲವಾದರೆ, ಭೂಮಿಯೊಡನೆಯೇ ಸೂರ್ಯನ ಸುತ್ತ ಭೂಸಮೀಪದ ಕಕ್ಷೆಯಲ್ಲಿ ಹಾರಾಡುತ್ತಿರುವಂಥವು ಕೆಲವು. ಹಬಲ್ ಅಂತರಿಕ್ಷ ದೂರದರ್ಶಕ 1990 ರಲ್ಲಿ ಉಡಾವಣೆಗೊಂಡಿತ್ತು. ಭೂ ಸಮೀಪ ಕಕ್ಷೆಯಲ್ಲಿ ಹಾರಾಡುತ್ತಿರುವ ಹಬಲ್, ಸಾವಿರಾರು ಚಿತ್ರಗಳ ಮೂಲಕ ನಮ್ಮ ಅಂತರಿಕ್ಷ ಅರಿವನ್ನು ಹೆಚ್ಚಿಸಿ, ಬಾಹ್ಯಾಕಾಶ ಉತ್ಸಾಹಿಗಳ ಕಣ್ಮಣಿಯಾಗಿದೆ. ಆದರೆ ಹಬಲ್ ದಿನೇ ದಿನೇ ಕ್ಷೀಣಿಸುತ್ತಿದೆ. ಅದರ ಯಂತ್ರಭಾಗಗಳು ಹಳೆಯದಾಗುತ್ತಿವೆ. ಐದು ಬಾರಿ ರಿಪೇರಿಗೊಳಗಾಗಿ ಇದೀಗ ತನ್ನ ಆಯಸ್ಸಿನ ಕೊನೆಯ ಹಂತದಲ್ಲಿದ್ದ ಹಬ್ಬಲ್ ದರ್ಶಕಕ್ಕೆ ಉತ್ತರಾಧಿಕಾರಿಯಾಗಿ ಜೇಮ್ಸ್‍ವೆಬ್ ನ್ನು ಹಾರಿಬಿಡಬೇಕು ಎಂದು 1993 ರಲ್ಲೇ ಪ್ರಸ್ತಾವಗೊಂಡು ನಿರ್ಮಾಣ ಆರಂಭಗೊಂಡಿದೆ. ಹಲವಾರು ಏಳುಬೀಳುಗಳ ನಡುವೆ ಕುಂಟುತ್ತ ಸಾಗಿದ ಜೇಮ್ಸ್‍ವೆಬ್ ನಿರ್ಮಾಣ ಈ ವರ್ಷ ಸಂಪೂರ್ಣವಾಗಬೇಕಿತ್ತು, ಆದರೆ 2018ಕ್ಕೆ ಅದು ಹಾರಾಟವನ್ನು ಆರಂಭಿಸಲಿದೆಯಂತೆ.
ಹಬಲ್ ಮತ್ತು ಜೇಮ್ಸ್‍ವೆಬ್ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಹಬಲ್ ಮಾನವ ಗೋಚರ ಬೆಳಕು ಮತ್ತು ಅವಗೆಂಪಿನ ಕೆಲವು ಕಡಿಮೆ ತರಂಗಾಂತರಗಳನ್ನು ಸಂಗ್ರಹಿಸಿ (ಸಮೀಪದ ಗೆಲಾಕ್ಸಿ ಮತ್ತಿತರ) ಆಕಾಶಕಾಯಗಳ ಕುರುಹುಗಳನ್ನು ನೀಡಿದರೆ, ಜೇಮ್ಸ್‍ವೆಬ್ ಅವಗೆಂಪು ಅಥವಾ ಇನ್‍ಫ್ರಾರೆಡ್ ಕಿರಣಗಳ ಅಧ್ಯಯನ ನಡೆಸಲಿದೆ.
ಇನ್ಫ್ರಾರೆಡ್ ತರಂಗಗಳೇ ಏಕೆ?
13 ಬಿಲಿಯನ್ ವರ್ಷಗಳ ಹಿಂದೆ ಆದಿ ಬಿಂದುವೊಂದರ ಮಹಾ ಆಸ್ಫೋಟದಿಂದ ವಿಶ್ವ ಆರಂಭಗೊಂಡಿತು ಎಂಬ ಬಿಗ್ ಬ್ಯಾಂಗ್ ವಾದ ಅಂದಿನಿಂದ ಇಂದಿಗೂ ವಿಶ್ವವು ವಿಸ್ತರಿಸುತ್ತಿದೆ ಎಂದೆನ್ನುತ್ತಿದೆ. (ಬಲೂನೊಂದರ ಮೇಲೆ ಇಡೀ ಬಾಹ್ಯಾಕಾಶ ಹರಡಿದೆ ಎಂದುಕೊಳ್ಳಿ. ಈಗ ಬಲೂನನ್ನು ಊದತೊಡಗಿದಂತೆ ಗೆಲಾಕ್ಸಿ, ನಕ್ಷತ್ರಗಳ ನಡುವಿನ ಸ್ಥಳ ಹಿಗ್ಗುವುದಷ್ಟ್ಟೆ? ವಿಶ್ವದ ವಿಸ್ತಾರವನ್ನು ಹೀಗೆ ಊಹಿಸಿಕೊಳ್ಳಬಹುದು.) ವಿಶ್ವದ ಉಗಮದ ಕೆಲವು ಲಕ್ಷ ವರ್ಷಗಳ ನಂತರ ರೂಪುಗೊಂಡ ಗೆಲಾಕ್ಸಿಗಳು ಹೊರಸೂಸಿದ ಕಿರಣಗಳು ಈ ಅಗಲೀಕರಣ ಕ್ರಿಯೆಯಿಂದಾಗಿ ಅವಗೆಂಪು ಕಿರಣಗಳಾಗಿ (ಇದೇ ರೆಡ್‍ಶಿಫ್ಟ್ ಅಥವಾ ಕೆಂಪುಪಲ್ಲಟ) ಪಸರಿಸುತ್ತಿವೆ. ಆ ಅವಗೆಂಪು ಅಥವಾ ಇನ್‍ಫ್ರಾರೆಡ್ ಕಿರಣಗಳನ್ನು ಜೇಮ್ಸ್ ವೆಬ್ ಗುರುತಿಸಲು ಸಾಧ್ಯವಾದರೆ, ವಿಶ್ವದ ಅಪರಿಚಿತ ಭಾಗಗಳನ್ನು ಪತ್ತೆ ಹಚ್ಚಲು ಸಾಧ್ಯವಾದೀತು.
ಗ್ರಹಗಳು ಹಾಗೂ ಕಂದು ಕುಬ್ಜಗಳಂಥಹ ಕ್ಷೀಣ ಕಾಂತಿಯುಳ್ಳ ಹಾಗೂ ಅತಿ ಶೈತ್ಯದಲ್ಲಿರುವ ಆಕಾಶ ಕಾಯಗಳು ಇನ್ಫ್ರಾರೆಡ್ ಬೆಳಕನ್ನು ಹೊರಹಾಕುತ್ತಿರುತ್ತವೆ. ಅವುಗಳನ್ನು ಗುರುತಿಸಲು ಅವೇ ತರಂಗಾಂತರದ ದೂರದರ್ಶಕಗಳು ಬೇಕು. ಈ ಕಾರ್ಯ ಜೇಮ್ಸ್‍ವೆಬ್‍ನಿಂದ ಸಾಧ್ಯವಾಗಲಿದೆ.
ಅಲ್ಲದೆ ಸಾದಾ ಬೆಳಕಿಗಿಂತ ಹೆಚ್ಚು ತರಂಗಾಂತರವಿರುವ ಅವಗೆಂಪು ಕಿರಣಗಳು ಅಂತರಿಕ್ಷದ ದೂಳು, ಗಾಳಿಗಳ ಮೂಲಕವೂ ಚದುರದೆ, ಸೂಸಿ ಬರುವುದರಿಂದ ಅವುಗಳ ಅಧ್ಯಯನ ದೂರದೂರದ ಅತಿ ಹಳೆಯ ಗೆಲಾಕ್ಸಿಗಳ ಬಗ್ಗೆ, ನೂರಾರು ನಕ್ಷತ್ರಗಳ ಮತ್ತು ಗ್ರಹಗಳ ಉಗಮದ ಬಗ್ಗೆ ನಮಗೆ ವಿವರ ನೀಡಲಿವೆ. ಹಬಲ್ ಗುರುತಿಸಿರುವ ಕಾಯಗಳಿಗಿಂತ ಸುಮಾರು 280 ದಶಲಕ್ಷ ವರ್ಷದಷ್ಟು ಹಳೆಯದಾದ ಕಾಯಗಳನ್ನು ಜೇಮ್ಸ್‍ವೆಬ್ ಕಂಡುಹಿಡಿಯುವ ನಿರೀಕ್ಷೆಯಿದೆ.
ಇಂಥ ಅದ್ವಿತೀಯ ಉಪಕರಣದ ನಿರ್ಮಾತೃ ಅಮೆರಿಕದ ನಾಸಾ ಸಂಸ್ಥೆ ಹಾಗೂ ಯುರೋಪು ಮತ್ತು ಕೆನಡಾದ ಅಂತರಿಕ್ಷ ಸಂಸ್ಥೆಗಳು. ಆಧುನಿಕ ತಂತ್ರಜ್ಞಾನದ ಸಾಮಥ್ರ್ಯಕ್ಕೇ ಸವಾಲಾಗಿರುವ ಜೇಮ್ಸ್‍ವೆಬ್‍ನ ತಾಂತ್ರಿಕ ರಚನೆಗೆ ಒಂದು ಸಾವಿರಕ್ಕೂ ಅಧಿಕ ಇಂಜಿನಿಯರುಗಳು ಕೈ ಹಾಕಿದ್ದಾರೆ.
ಜೇಮ್ಸ್‍ವೆಬ್ ಹಾರಾಟ
ಜೇಮ್ಸ್‍ವೆಬ್‍ನ ಕಕ್ಷೆ ಭೂಮಿಯಿಂದ 15ಲಕ್ಷ ಕಿಮೀ ದೂರದ ‘ಲಾಗ್ರೇಂಜ್ ಬಿಂದು ಐ2’ ವಿನ ಬಳಿ ಸಾಗಲಿದೆ. ಈ ಕಕ್ಷೆಯ ವಿಶೇಷತೆಯೆಂದರೆ ಇಲ್ಲಿ ಹಾರಾಡುವ ವಸ್ತು ಭೂಮಿ ಮತ್ತು ಸೂರ್ಯ ಇವೆರಡರ ಗುರುತ್ವಕ್ಕೊಳಗಾಗುತ್ತದೆ. ಎರಡೂ ಕಡೆಯಿಂದ ಜಗ್ಗುವ ಬಲದಡಿಯಲ್ಲಿ, ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಲಿಸುತ್ತ ಭೂಮಿಯಷ್ಟೇ ವೇಗವಾಗಿ ಅದು ಸೂರ್ಯನನ್ನು ಸುತ್ತು ಹಾಕಲಿದೆ. ಸೂರ್ಯನ ತಾಪ, ಭೂಮಿಯಿಂದ ಪ್ರತಿಫಲನಗೊಂಡ ಕಿರಣಗಳು ಹಾಗೂ ದರ್ಶಕದ ಉಪಕರಣಗಳು ಉಂಟುಮಾಡುವ ವಿಕಿರಣಗಳಿಂದ ರಕ್ಷಣೆ ಪಡೆಯಲು ಟೆನಿಸ್ ಕೋರ್ಟ್‍ನಳತೆಯ ಗಾಳಿಪಟದಂತಿರುವ ‘ತಂಪುಗುರಾಣಿ’(ಸನ್‍ಶೀಲ್ಡ್)ಯೊಂದನ್ನು ಬಳಸಲಾಗುವುದು. ಸೂರ್ಯನ ಬಿಸಿಯನ್ನು ಅಂತರಿಕ್ಷಕ್ಕೆ ಮರಳಿ ಕಳಿಸುವಂತೆ ಆಲ್ಯುಮಿನಿಯಂ ಮತ್ತು ಸಿಲಿಕಾನ್ ಮಿಶ್ರಣದಿಂದ ಮಾಡಿದ ಕೆಪ್ಟಾನ್ ಎಂಬ ವಸ್ತುವಿನ ಐದು ಮಡಿಕೆಗಳ ಗುರಾಣಿ ಇದು. ಇದು ಸೂರ್ಯಕಿರಣಗಳ ಜೊತೆಗೆ ವೇಗವಾಗಿ ಹಾರಾಡುತ್ತಿರುವ ಚಿಕ್ಕ ಪುಟ್ಟ ಬಾಹ್ಯಾಕಾಶ ಕಸಗಳಿಂದಲೂ ರಕ್ಷಣೆ ಪಡೆಯುವ ಸಾಧನವಾಗಲಿದೆ. ಗುರಾಣಿಯ ಒಂದು ಬದಿಗೆ ದರ್ಶಕದ ವೈಜ್ಞಾನಿಕ ಉಪಕರಣಗಳಿದ್ದರೆ, ಇನ್ನೊಂದು ಪಕ್ಕದಲ್ಲಿ ಸಂಪರ್ಕ ಸಾಧನಗಳು ಹಾಗೂ ಸೌರಫಲಕಗಳು ಜೋಡಣೆಗೊಳ್ಳಲಿವೆ. ಹಾರಾಟಕ್ಕೆ ಮುನ್ನ ದರ್ಶಕದ ಈ ಅಂಗವನ್ನು ಪುಟ್ಟದಾಗಿ ಮಡಿಕೆ ಮಾಡಿ ದರ್ಶಕದ ಉಳಿದ ಭಾಗದೊಂದಿಗೆ ಜೋಡಿಸಿಡಲಾಗುವುದು.
ದೂರದರ್ಶಕದ ಮೂಲ ಉದ್ದೇಶವೆಂದರೆ, ದೂರದಿಂದ ಹಾದು ಬರುವ ಬೆಳಕಿನ ಕಿರಣಗಳನ್ನು (ಅಂದರೆ ಚಿತ್ರವನ್ನು) ಸಂಗ್ರಹಿಸಿ, ಅದನ್ನು ದೊಡ್ಡದಾಗಿಸಿ ನಮ್ಮ ಕಣ್ಣಿಗೆ ದಾಟಿಸುವುದು. ನಮಗೆ ಗೋಚರವಾಗುವ ಬೆಳಕನ್ನು ಈ ರೀತಿಯಾಗಿ ಪಡೆಯಬಹುದು ಆದರೆ ವಿದ್ಯುತ್ಕಾಂತೀಯ ರೋಹಿತ ಪಟ್ಟಿಯ ಉಳಿದ ಅಲೆಗಳನ್ನು (ಉದಾಹರಣೆಗೆ, ಇನ್‍ಫ್ರಾರೆಡ್ ಅಥವಾ ಅವಗೆಂಪು ಅಲೆಗಳು) ಪಡೆಯಲು ಸ್ವಲ್ಪ ಬೇರೆಯದೇ ವಿಧಾನವನ್ನು ಬಳಸಲಾಗುತ್ತದೆ. ಅವಗೆಂಪು ಕಿರಣಗಳು ಮೂಲತಃ ಉಷ್ಣಕಿರಣಗಳಾಗಿದ್ದರಿಂದ ಅವುಗಳನ್ನು ದರ್ಪಣಗಳ ಮೂಲಕ ಸಂಗ್ರಹಿಸಿ ಪತ್ತೆಕಾರಿ (ಡಿಟೆಕ್ಟರ್-ವಿಶೇಷವಾದ ಡಿಜಿಟಲ್ ಉಪಕರಣ) ಯ ಮೇಲೆ ಕೇಂದ್ರೀಕರಿಸಿ, ಮುಂದೆ ಕಂಪ್ಯೂಟರ್ ಸಹಾಯದಿಂದ ವಿಶ್ಲೇಷಿಸಲಾಗುತ್ತದೆ. ಈ ಪತ್ತೆಕಾರಿಗಳು ಬೆಳಕಿನ ಸೂಕ್ಷ್ಮಗ್ರಾಹಿಗಳು. ಸುತ್ತಲ ಬೆಳಕು ಪ್ರಭಾವ ಬೀರದಿರಲೆಂದು ಡಿಟೆಕ್ಟರ್‍ಗಳನ್ನು ಅತಿಶೈತ್ಯ ಪರಿಸರದಲ್ಲಿ ಇಡಲಾಗುತ್ತದೆ. ಇದಕ್ಕಾಗಿ ಬಳಸುವ ವಸ್ತು ಸಾರಜನಕ. ಸಾರಜನಕ ಸಾಮಾನ್ಯ ಉಷ್ಣತೆಯಲ್ಲಿ ಅನಿಲ ರೂಪ, ಆದರೆ ಶೀತಲೀಕರಿಸಿದಾಗ ದ್ರವವಾಗುತ್ತದೆ. ಆದ್ದರಿಂದ ದರ್ಪಣಗಳ ಮೂಲಕ ದೂರದರ್ಶಕದ ಒಳನುಗ್ಗುವ ಅವಗೆಂಪು ಕಿರಣಗಳನ್ನು ಹೀರಿಕೊಳ್ಳಲು ಅನುಕೂಲವಾಗುವಂತೆ ಪತ್ತೆಕಾರಿಗಳನ್ನು ಶೈತ್ಯಗೊಳಿಸಿದ (-224ಡಿಗ್ರಿ ಸೆಂಟಿಗ್ರೇಡ್) ಸಾರಜನಕ ದ್ರವದಲ್ಲಿ ಅದ್ದಿಡಲಾಗುತ್ತದೆ.
ದರ್ಪಣ ದೊಡ್ಡದಾದಷ್ಟೂ ಹೆಚ್ಚು ಬೆಳಕನ್ನು ಸಂಗ್ರಹಿಸಲು ಸಾಧ್ಯವಿದೆ. ಆದ್ದರಿಂದಲೇ ಜೇಮ್ಸ್‍ವೆಬ್‍ನ ದರ್ಪಣ ಹಬಲ್ ಗಿಂತ ಐದು ಪಟ್ಟು ದೊಡ್ಡದಿದ್ದು, ಆರು ಮೀಟರ್ ವ್ಯಾಸದ ಫಲಕವಾಗಿ ವಿನ್ಯಾಸಗೊಂಡಿದೆ. ಅಷ್ಟೊಂದು ಅಗಲದ ಮೇಲ್ಮೈನ ಕನ್ನಡಿಯನ್ನು ಈಗಿರುವ ಯಾವ ರಾಕೆಟ್ಟೂ ಉಡಾವಣೆ ಮಾಡುವ ಸಾಮಥ್ರ್ಯ ಹೊಂದಿಲ್ಲ. ಅದಕ್ಕಾಗಿ ಮುಖ್ಯ ದರ್ಪಣವನ್ನು ಷಡ್ಭುಜಾಕೃತಿಯ ಹದಿನೆಂಟು ಬಿಡಿ ಬಿಡಿ ಸರಳ ಕನ್ನಡಿಗಳಾಗಿ ನಿರ್ಮಿಸಲಾಗುವುದು. ದೂರದರ್ಶಕ ಉಪಗ್ರಹ ತನ್ನ ಸ್ಥಾನ ಸೇರಿದ ನಂತರ ಅವೆಲ್ಲವೂ ಬಿಚ್ಚಿಕೊಂಡು ಒಂದಾಗಿ ಮುಂದೆ ಕಾರ್ಯನಿರ್ವಹಿಸಬೇಕು. ಈ ಬಿಡಿ ಕನ್ನಡಿಗಳ ನಕ್ಷೆ, ನಿರ್ಮಾಣ, ಉಡಾವಣೆ ಪ್ರತಿಯೊಂದೂ ಕಾರ್ಯ ಅತ್ಯುತ್ತಮ ತಂತ್ರಜ್ಞಾನ ಕೌಶಲವನ್ನು ಬೇಡುತ್ತಿವೆ. ಇತ್ತೀಚೆಗೆ ತಾನೇ ಮುಗಿದ ಬೆರಿಲಿಯಂ ಲೋಹದ ಕನ್ನಡಿಗಳಿಗೆ ಚಿನ್ನದ ಪಾಲಿಶ್ ಕೆಲಸವೊಂದಕ್ಕೇ ಒಂದು ವರ್ಷ ಕಾಲ ಹಿಡಿದಿದೆ.
ಜೇಮ್ಸ್‍ವೆಬ್ ಕಕ್ಷೆಯನ್ನು ಸೇರಿದ ಮೇಲೆ ಒಂದಾದ ಮೇಲೊಂದರಂತೆ ದರ್ಪಣಗಳು, ತಂಪುಗುರಾಣಿ ಹಾಗೂ ಸೌರಫಲಕಗಳು ಬಿಚ್ಚಿಕೊಳ್ಳಲಿವೆ. ಎಲ್ಲ ಉಪಕರಣಗಳು ಮತ್ತೆ ಮತ್ತೆ ಪರೀಕ್ಷೆಗೊಳಗಾಗುತ್ತಿವೆ. ಒಮ್ಮೆ ಸಿದ್ಧಗೊಂಡಿತೆಂದರೆ ಈ ದೂರದರ್ಶಕವನ್ನು ಏರಿಯನ್ ರಾಕೆಟ್ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ.
ಭೂಸಮೀಪದ ಕಕ್ಷೆಯಲ್ಲಿ ಹಾರಾಟ ನಡೆಸುತ್ತಿರುವ ಹಬಲ್‍ಗೆ ಅಂತರಿಕ್ಷ ನೌಕೆಯ ಮೂಲಕ ಐದು ಬಾರಿ ತಂತ್ರಜ್ಞರು ಭೇಟಿ ನೀಡಿ ಯಂತ್ರೋಪಕರಣಗಳ ಉಸ್ತುವಾರಿ ನಡೆಸಿದ್ದಾರೆ. ಜೇಮ್ಸ್‍ವೆಬ್ ದುರಸ್ತಿಗೊಳಗಾಯಿತೆಂದರೆ, 15 ಲಕ್ಷ ಕಿಮೀ ದೂರ ಹೋಗಿ ಅದನ್ನು ರಿಪೇರಿ ನಡೆಸುವುದು ಕಷ್ಟ. ಆದ್ದರಿಂದ ಆ ಸೌಲಭ್ಯವನ್ನು ಜೇಮ್ಸ್‍ವೆಬ್‍ಗೆ ಒದಗಿಸಲಾಗಿಲ್ಲ.
ಹಣಕಾಸಿನ ಮುಗ್ಗಟ್ಟನ್ನು ಮುಂದಿಟ್ಟು ಜೇಮ್ಸ್‍ವೆಬ್‍ನ ನಿರ್ಮಾಣವನ್ನು ಒಮ್ಮೆ ಸ್ಥಗಿತಗೊಳಿಸಲಾಗಿತ್ತು. ಆದರೆ ಮುಕ್ಕಾಲು ಪಾಲು ಯಂತ್ರ ನಿರ್ಮಾಣ ಮುಗಿದಿದ್ದ ಜೇಮ್ಸ್‍ವೆಬ್ ಯೋಜನೆ ಮತ್ತೊಮ್ಮೆ ಜೀವದಾನ ಪಡೆದಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ, 680 ಕೋಟಿ ಡಾಲರ್ ವೆಚ್ಚ(!)ದಲ್ಲಿ ನಿರ್ಮಾಣ ಸಂಪೂರ್ಣಗೊಂಡು ಗಗನಕ್ಕೇರಿ ಬಾಹ್ಯ ಆಕಾಶವನ್ನು ನಿಟ್ಟಿಸುವ ಅತ್ಯದ್ಭುತ ಕಲಾಕೃತಿಯಾಗಿ ಜೇಮ್ಸ್ ವೆಬ್ ಹಾರಾಟ ಆರಂಭಿಸಲಿದೆ. ಆದರೆ, 2018 ರವರೆಗೆ ಅದಕ್ಕಾಗಿ ಕಾಯಬೇಕಾಗಿದೆ.
ಸರೋಜ ಪ್ರಕಾಶ್
- Advertisement -
- Advertisement -
- Advertisement -
- Advertisement -