ಒಂದಲ್ಲ, ಎರಡಲ್ಲ, ಕಳೆದ ಮೂವತ್ತೈದು ವರ್ಷಗಳಿಂದ ಒಂದೇ ಓಟ ಕಿತ್ತು ಓಡುತ್ತಿದೆ ವಾಯೇಜರ್.
ಏನಿದು ವಾಯೇಜರ್?
ಇದೊಂದು ಮಾನವನಿರ್ಮಿತ ಅಂತರಿಕ್ಷನೌಕೆ. 1977ರಲ್ಲಿ ಉಡ್ಡಯನಗೊಂಡು ಅಂದಿನಿಂದ ಇಂದಿನವರೆಗೂ ಹಾರುತ್ತಲೇ ಇದೆ. ಸೂರ್ಯನ ಪ್ರಭಾವವಲಯದ ಆಚಿನ ಲೋಕಕ್ಕೆ ಹೊರಟಿರುವ ಪ್ರಪ್ರಥಮ ನೌಕೆ ಇದು.
ಮಾನವ ಆಗಸಕ್ಕೆ ಹಾರಿಬಿಟ್ಟ ಉಪಗ್ರಹಗಳು, ಗಗನನೌಕೆಗಳು ಇಂದಿನ ದಿನಗಳಲ್ಲಿ ವಿಶೇಷವೇನಲ್ಲ ನಿಜ. ಒಂದು ಕಾಲದಲ್ಲಿ ಮುಂದುವರಿದ ದೇಶಗಳಿಗಷ್ಟೇ ಸೀಮಿತವಾಗಿದ್ದ ಆ ಕೈಚಳಕವನ್ನು, ತಂತ್ರಜ್ಞಾನವನ್ನು ಇಂದು ಹಲವಾರು ದೇಶಗಳು ತಮ್ಮದಾಗಿಸಿಕೊಂಡಿವೆ. ಭೂಉಪಗ್ರಹಗಳನ್ನು ಬಿಟ್ಟರೆ, ಚಂದ್ರ, ಮಂಗಳರ ಅಧ್ಯಯನಕ್ಕೆ ತೊಡಗಿದ ನೌಕೆಗಳು ಹತ್ತಾರಿವೆ. ಇನ್ನೂ ದೂರಕ್ಕೆ ಹೊರಟರೆ, ಪಯೋನೀರ್ ಹೆಸರಿನ ನೌಕಾಜೋಡಿಗಳು, ಪ್ಲೂಟೋನತ್ತ ಓಟ ಕಿತ್ತಿರುವ ನ್ಯೂಹಾರಿಝಾನ್ಸ್ ಹಾಗೂ ವಾಯೇಜರ್ ಜೋಡಿಗಳು ಹಾರುತ್ತಿವೆ. ಇವುಗಳಲ್ಲಿ ವಾಯೇಜರ್ 1 ಇತ್ತೀಚೆಗೆ ತಾನೇ 35 ವರ್ಷಗಳ ಓಟಗಳನ್ನು ಪೂರೈಸಿ, ದಣಿವಿಲ್ಲದೆ ಮತ್ತೂ ಮುಂದಕ್ಕೆ ಸಾಗುತ್ತಿದೆ. ಸೌರಮಂಡಲದ ಅಂಚಿನಲ್ಲಿರುವ ಸೂರ್ಯಗೋಲದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳುಹಿ ಆನಂತರ ಶಕ್ತಿ ಇರುವವರೆಗೂ ಓಡುತ್ತಿರಲು ಅದನ್ನು ಸಜ್ಜುಗೊಳಿಸಲಾಗಿದೆ. ವಾಯೇಜರ್‍ನಲ್ಲಿರುವ ಅಣುವಿಕಿರಣ ಮೂಲದ ವಿದ್ಯುತ್ 2025 ವರೆಗೆ ನೌಕೆಯನ್ನು ಹೊತ್ತೊಯ್ಯಲಿದೆ. ಅಲ್ಲಿಯವರೆಗೂ ಮಾಹಿತಿಗಳ ಅಲೆ ಸೌರವ್ಯೂಹದ ಅಂಚಿನಿಂದ ಈ ಭೂಗ್ರಹದವರೆಗೆ ಹರಿದು ಬರಲಿದೆ.
ಹಿನ್ನೆಲೆ:
ನಿಸರ್ಗದ ದಿನನಿತ್ಯದ ವಹಿವಾಟುಗಳನ್ನು ಮಾನವ ಅಚ್ಚರಿಯಿಂದ ಕಾಣುತ್ತಿದ್ದ ದಿನಗಳಿದ್ದವು, ಸೂರ್ಯಕೇಂದ್ರಿತ ವ್ಯವಸ್ಥೆಯಲ್ಲಿ ನಾವಿದ್ದೇವೆ, ನಮ್ಮೆಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ ಎಂದು ಕೊಪರ್ನಿಕಸ್ ಸಾರಿದಾಗ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತ್ತು. ಅಲ್ಲಿಂದ ನಾವೀಗ ಬಹು ದೂರ ಸಾಗಿ ಬಂದಿದ್ದೇವೆ. ನಮ್ಮ ಸುತ್ತಲ ಬ್ರಹ್ಮಾಂಡದ ಬಗ್ಗೆ ಅರಿವು ಅನೇಕ ಪಟ್ಟು ಹೆಚ್ಚಿದೆ. ಕಣ್ಣಿಗೆ ಕಂಡದ್ದನ್ನು ಪ್ರಯೋಗಗಳ ಮೂಲಕ ಒರೆಹಚ್ಚಿ, ಕಾಣದ್ದನ್ನು ಮೊದಲು ಕಲ್ಪಿಸಿ, ಆನಂತರ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುವಂಥಹ ಬುದ್ಧಿಮಟ್ಟ ಮಾನವನದ್ದಾಗಿದೆ.
1977 ಬಾನಾಸಕ್ತಿ ಉಳ್ಳವರಿಗೆ ವಿಶೇಷ ವರ್ಷ. ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು ಒಂದರ ಪಕ್ಕ ಒಂದು ಹಾದುಹೋಗುತ್ತ ಒಂದೇ ಗೆರೆಯಲ್ಲಿ ಕೆಲಕಾಲ ಸಾಗುವ, 170 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಅಪರೂಪದ ವಿದ್ಯಮಾನ, ಖಗೋಳಶಾಸ್ತ್ರಜ್ಞರಿಗೆ ಈ ಅವಕಾಶವನ್ನು ಬಳಸಿಕೊಂಡು ಆಚೆ ಹಾರಹೊರಟಿರುವ ಬಾನನೌಕೆಗಳಿಗೆ ಈ ಗ್ರಹಗಳ ಗುರುತ್ವದ ನೂಕುಬಲ ದೊರೆಯುವಂತೆ ಮಾಡುವ ಹಂಬಲ ಹೊಂದಿದ್ದರು.*
ಇದಕ್ಕೆಂದು ಅಮೆರಿಕದಲ್ಲೊಂದೇ ಹತ್ತಾರು ಯೋಜನೆಗಳು ಸಿದ್ಧಗೊಂಡವು. ಕೊನೆಯಲ್ಲಿ ಹಣಕಾಸಿನ ಅನುಮತಿ ದೊರೆತಿದ್ದು ವಾಯೇಜರ್ ಯೋಜನೆಗೆ ಮಾತ್ರ. ವಾಯೇಜರ್ ಹೆಸರಿನ ಎರಡು ನೌಕೆಗಳು ನಿರ್ಮಾಣಗೊಂಡು 1977ರ ಅಗಸ್ಟ್ ನಲ್ಲಿ ವಾಯೇಜರ್ 2 ಹಾಗೂ ಸೆಪ್ಟೆಂಬರಿನಲ್ಲಿ ವಾಯೇಜರ್ 1 ಮ್ಯಾರಥಾನ್ ಓಟಕ್ಕೆ ತೊಡಗಿದವು. ಎರಡೂ ಹಾರಿದ್ದು ಅಮೆರಿಕದ ಕೇಪ್ ಕಾರ್ನಿವಲ್‍ನಿಂದಲೇ ದರೂ ಅವುಗಳ ಹಾರುಮಾರ್ಗಗಳು ಬೇರೆಬೇರೆ. ವಾಯೇಜರ್ 1 ಕೊನೆಗೆ ಹೊರಟರೂ ವೇಗದ ಓಟ ಹಾಗೂ ಸಮೀಪದ ಮಾರ್ಗದಿಂದಾಗಿ ಮುಂದೆಮುಂದಕ್ಕೆ ಹಾರುತ್ತಾ ಹೊರಟಿತು. ಗುರು ಮತ್ತು ಶನಿ ಗ್ರಹಗಳ ಮಾರ್ಗವಾಗಿ ಹಾರಿದ ವಾಯೇಜರ್ 1 90ರ ದಶಕದಲ್ಲಿ ಇನ್ನೆರಡು ಬಾಹ್ಯಾಕಾಶ ನೌಕೆಗಳಾದ ಪಯೊನಿರ್ 10 ಮತ್ತು ಪಯೊನಿರ್ 11 ರನ್ನು ಹಿಂದಿಕ್ಕಿ ಭೂಮಿಯಿಂದ ಮತ್ತೂ ದೂರಕ್ಕೆ ಹಾರಿತು. ಮಾನವನಿರ್ಮಿತ ಹಾಗೂ ಮಾನವನಿಂದ ಅತಿ ದೂರಕ್ಕೆ ಹಾರುತ್ತಿರುವ ಬಾನ ನೌಕೆ ಎಂಬ ಹೆಗ್ಗಳಿಕೆಯನ್ನು ವಾಯೇಜರ್ 1990ರಲ್ಲಿಯೇ ಪಡೆಯಿತು.
ಪುಟ್ಟ 64 ಕಿಲೋಬೈಟ್ ಸಾಮಥ್ರ್ಯದ ಕಂಪ್ಯೂಟರ್ ಪೆಟ್ಟಿಗೆ, ದೊಡ್ಡದಾದ ಅಂಟೆನಾ, ಕ್ಯಾಮೆರಾಗಳು, ವಿಕಿರಣ ಮೂಲದ ಶಕ್ತಿ ಆಕರ, ಸೂರ್ಯನ ಕಾಂತವನ್ನು ಅಳೆಯುವ ಸಾಧನ ಇಷ್ಟೇ ಅಲ್ಲ, ಅಮೂಲ್ಯವಾದ ಮಾನವಮಾಹಿತಿಯನ್ನು ಹೊಂದಿದ ಗೋಲ್ಡನ್ ರೆಕಾರ್ಡನ್ನೂ ಕೂಡ ವಾಯೇಜರ್ ತನ್ನೊಡನೆ ಒಯ್ದಿದೆ. ದೂರದ ಅಂತರಿಕ್ಷದಲ್ಲಿ ಅನ್ಯಜೀವಿಗಳೇನಾದರೂ ಎದುರಾಗಿ ವಾಯೇಜರನ್ನು ಜಪ್ತಿ ಮಾಡಿದರೆ? (ಅಂಥ ಅವಕಾಶಗಳು ಅತೀ ಕಡಿಮೆ, ಏಕೆಂದರೆ ಬೃಹತ್ ವಿಶ್ವದಲ್ಲಿ ಸೂಜಿಮೊನೆಗಿಂತ ಚಿಕ್ಕದಾಗಿರುವ ವಾಯೇಜರ್ ಇನ್ನೊಂದು ನಕ್ಷತ್ರದ ಪಕ್ಕ ಹಾದುಹೋಗುವುದಾದರೂ ಅದಿನ್ನೂ ನಲವತ್ತು ಸಾವಿರ ವರ್ಷಗಳ ನಂತರ!)
ಗೋಲ್ಡನ್ ರೆಕಾರ್ಡ್ ಸಿಡಿಯಲ್ಲಿ 55 ಭಾಷೆಗಳಲ್ಲಿ ಶುಭಾಶಯ ನುಡಿಗಳು, ಸಂಗೀತ, ಪ್ರಾಣಿಗಳ ಕೂಗುಗಳು, ಸೌರಮಂಡಲದ, ಭೂಮಿ, ಮನುಷ್ಯ, ಪ್ರಾಣಿ ಪಕ್ಷಿಗಳ ರೇಖಾಚಿತ್ರಗಳು ಇತ್ಯಾದಿ ಭೂಮಿಯ ಜೀವಜಗತ್ತಿನ ಪ್ರಮುಖ ಲಕ್ಷಣಗಳೆಲ್ಲವೂ ಇವೆ.
ಸೂರ್ಯನ ಸುತ್ತ ಮೂರನೇ ಗ್ರಹವಾಗಿ ನಾವು ಹಾರುತ್ತಿದ್ದೇವೆವಷ್ಟೆ? ಬುಧ, ಶುಕ್ರ, ಭೂಮಿ, ಮಂಗಳ ಗ್ರಹಗಳು ಗಟ್ಟಿಗ್ರಹಗಳು, ಅವುಗಳ ನಂತರ ಕ್ಷುದ್ರಗ್ರಹಗಳ ಪಟ್ಟಿ, ಆ ಬಳಿಕ ಗುರು,ಶನಿ, ಯುರೇನಸ್ ಮತ್ತು ನೆಪ್ಚೂನ್ ಅನಿಲಗ್ರಹಗಳು ಈ ನಡುವೆ ನೂರಾರು ಉಪಗ್ರಹಗಳು, ಕಿರುಗ್ರಹಗಳು ಕೊನೆಯಲ್ಲಿ ಸೂರ್ಯಗೋಲ ಮತ್ತು ಅದರಾಚೆ ದೀರ್ಘಕಕ್ಷೆಯ ಧೂಮಕೇತುಗಳ ಮೂಲನೆಲೆಯಾಗಿರುವ ವೈಪರ್ ಪಟ್ಟಿ ಹಾಗೂ ಕಟ್ಟಕಡೆಗಿನ ಊರ್ತ್ ಮೋಡದ ಕಡಗದೊಂದಿಗೆ ಸೂರ್ಯನ ಶೃಂಗಾರ ಮುಗಿಯುತ್ತದೆ. ಊರ್ತ್ ಕಡಗದ ಆಚೆ ಅಂತರತಾರಾ ವಲಯ. ಅಲ್ಲಿ ಸೂರ್ಯನದ್ದೇನೂ ಪ್ರಭಾವವಿಲ್ಲ. ಅಲ್ಲಿ ವಿಕಿರಣಭರಿತ ಕಾಸ್ಮಿಕ್ ಕಿರಣಗಳ ಹೊಯ್ದಾಟ ನಡೆಯುತ್ತಿದೆ.
2009ರ ಅಗಸ್ಟ್ ತಿಂಗಳಲ್ಲಿ ಸೂರ್ಯನಿಂದ 1600 ಕೋಟಿ ದೂರದಲ್ಲಿ ತಾಸಿಗೆ ಅರವತ್ತು ಸಾವಿರ ಕಿಮೀ ವೇಗದಲ್ಲಿ ಹಾರುತ್ತಿದ್ದ ವಾಯೇಜರ್ ಸೆಕೆಂಡಿಗೆ ಲಕ್ಷಗಟ್ಟಲೆ ಕಿಮೀ ವೇಗದಲ್ಲಿ ಬೀಸುತ್ರಿದ್ದ ಸೂರ್ಯಗಾಳಿ ಒಮ್ಮೆಗೇ ಕಡಿಮೆಯಾಗಿದೆಯೆಂದು ವರದಿ ಮಾಡಿದೆ.
ಸೂರ್ಯ ಬಿಸಿಲು ಬೆಳಕನ್ನಷ್ಟೇ ಅಲ್ಲ, ವಿದ್ಯುತ್ ಕಣಗಳನ್ನೂ ಸದಾಕಾಲ ಫೂತ್ಕರಿಸುತ್ತಿದ್ದಾನೆ. ಭೂಮಿಯ ಕಾಂತಗುಣ ಹಾಗೂ ವಾಯುಮಂಡಲದಿಂದಾಗಿ ಆ ಸೌರಗಾಳಿಯಿಂದ ನಮಗೆ ರಕ್ಷಣೆ ದೊರೆಯುತ್ತಿದೆ. ಆ ವಿದ್ಯುತ್ ಕಣಗಳು ಸೌರಮಂಡಲದ ಅಂಚಿನವರೆಗೂ ಸಾಗಿ ಅಲ್ಲಿ ಶಕ್ತಿಕಳೆದುಕೊಂಡು ಗುಡ್ಡೆಯಾಗಿ ಬೀಳುತ್ತವೆ. ಅದೇ ಸೂರ್ಯಗೋಲ. ಈ ಗೋಲದ ಒಳಗಡೆ ಇರುವ ಪ್ರತಿಯೊಂದು ವಸ್ತುವೂ ಸೌರವ್ಯೂಹಕ್ಕೆ ಸೇರಿದ್ದು. ಬಾಹ್ಯಆಕಾಶದ ಕಾಸ್ಮಿಕ್ ಕಿರಣಗಳು ಸೌರವ್ಯೂಹವನ್ನು ಪ್ರವೇಶಿಸದಂತೆ ಈ ಗೋಲ ತಡೆಯುತ್ತದೆ. ಸೂರ್ಯಗೋಲದ ಅಂಚೆಂದರೆ ಸದಾ ತುಮುಲದ ಪ್ರದೇಶ, ಅಲ್ಲಿ ಆಚಿನ ಬ್ರಹ್ಮಾಂಡದಿಂದ ಜಿಗಿದು ಬರುತ್ತಿರುವ ವಿಕಿರಣದ ಬಾಣಗಳಿವೆ, ಇಲ್ಲಿಂದ ಆಚೆ ಜಿಗಿಯಲೆತ್ನಿಸುವ ಸೂರ್ಯಕಣಗಳಿವೆ, ಕಾಂತಕಿರಣಗಳಿಲ್ಲಿ ಗುಡ್ಡೆಯಾಗಿ ಬಿದ್ದಿವೆ, ಆಗೀಗೊಂದಿಷ್ಟು ಚಿಮ್ಮಿ ಹೊರಕ್ಕೆ ಜಿಗಿಯುತ್ತಿವೆ. ಅದೊಂದು ಕದನ ಸ್ಥಳ ಅಲ್ಲಿ ಸದಾಕಾಲ ಸೂರ್ಯನಿಂದ ಚಿಮ್ಮುವ ಕಿರಣಗಳಿಗೂ ಬಾಹ್ಯ ಕಾಸ್ಮಿಕ್ ಕಿರಣಗಳಿಗೂ ಜಟಾಪಟಿ. ಸೋತು ಬಿದ್ದ ಸೂರ್ಯಕಣಗಳು ಗುಳ್ಳೆಯಾಗಿ ಹರಡಿವೆ. ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿದೆಯೆಂದು ವಾಯೇಜರ್ ತಿಳಿಸಿದೆ.
ಸೌರಮಂಡಲದ ಹೊರಗಣ ನಾಲ್ಕೂ ಅನಿಲದೈತ್ಯಗಳ ಬಗ್ಗೆ ಬಹಳಷ್ಟು ವಿವರಗಳನ್ನು ವಾಯೇಜರ್ ನೌಕೆಗಳು ಕಳುಹಿಸಿವೆ. ಗುರುಗ್ರಹವನ್ನು ಹಾದು ಹೋಗುವಾಗ ಅದಕ್ಕಿರುವ ಅಸ್ಪಷ್ಟ ಬಳೆಗಳು, ಎರಡು ಪುಟ್ಟದಾದ ಉಪಗ್ರಹಗಳು, ಅದರ ವಾತಾವರಣದ ಸಮೀಪದ ದೃಶ್ಯಗಳು, ಯುರೋಪಾ ಹೆಸರಿನ ಉಪಗ್ರಹದ ಹಿಮಗಡ್ಡೆಯ ಬಿರುಕಿನಲ್ಲಿ ಸಮುದ್ರವಿರುವ ಲಕ್ಷಣ, ಶನಿಯ ಉಂಗುರದೊಳಗಡೆಯಿಂದ ಇಣುಕಿದ ಉಪಗ್ರಹಗಳು, ಟೈಟಾನ್ ಉಪಗ್ರಹದ ವಾತಾವರಣದಲ್ಲಿ ಸಾರಜನಕ ಮತ್ತು ಮಿಥೇನ್ ಅನಿಲಗಳ ಇರುವಿಕೆ, ನೆಪ್ಚೂನಿನ ಆಗಸದಲ್ಲಿ ವೇಗವಾಗಿ ಬೀಸುತ್ತಿದ್ದ ಬಿರುಗಾಳಿ ಇವೆಲ್ಲವೂ ವಾಯೇಜರ್ ಜೋಡಿನೌಕೆಗಳ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ನೋಟಗಳು.
ಲೋ, ಗುರುಗ್ರಹವನ್ನು ಸುತ್ತುತ್ತಿರುವ ಉಪಗ್ರಹ. ಲೋ ದಿಂದ ಬರೀ 20 ಸಾವಿರ ಕಿಮೀ ದೂರದಿಂದ 1979 ರಲ್ಲಿ ಹಾದುಹೋದ ವಾಯೇಜರ್ ಮೇಲ್ಮೈನಲ್ಲಿ ಜ್ವಾಲಾಮುಖಿಯ ಕುರುಹನ್ನು ಪತ್ತೆ ಮಾಡಿತ್ತು. ಸೌರಮಂಡಲದಲ್ಲಿ ಭೂಮಿಯನ್ನು ಬಿಟ್ಟರೆ ಜ್ವಾಲಾಮುಖಿ ಬೇರೆಡೆ ಇರಬಹುದೆಂಬ ಊಹೆಯೇ ವಿಜ್ಞಾನಿಗಳಲ್ಲಿ ಉದ್ವೇಗ ಮೂಡಿಸಿತ್ತು. ಗುರುವಿನ ಯುರೋಪಾ, ಶನಿಯ ಟೈಟಾನ್ ಹಾಗೂ ನೆಪ್ಚೂನಿನ ಟ್ರೈಟಾನ್ ಉಪಗ್ರಹಗಳಲ್ಲಿ ನೀರಿನ ಮೂಲ ಇರÀಬಹುದೆಂದು ವಾಯೇಜರಿನ ಮಾಹಿತಿಗಳು ತಿಳಿಸಿದವು.
ದೂರ ಹೋದಂತೆ ವಾಯೇಜರ್‍ನಿಂದ ಬರುತ್ತಿದ್ದ ಮಾಹಿತಿಯ ವೇಗವೂ ತಗ್ಗಿದೆ. ಆದರೆ ವಿಜ್ಞಾನಿಗಳ ಉತ್ಸಾಹ ಕುಂದಿಲ್ಲ. ಭೌತ, ಗಣಿತಶಾಸ್ತ್ರಗಳ ಲೆಕ್ಕಾಚಾರ ಹಾಕಿ ಭೂಮಿಯ ಮೇಲೆ ರೇಡಿಯೋ ಅಲೆಗಳನ್ನು ಸಂಗ್ರಹಿಸುವ ಅಂಟೆನಾಗಳ ಸಾಮಥ್ರ್ಯವನ್ನು ಹೆಚ್ಚಿಸಿ ವಾಯೇಜರ್ ಬಾನಾಡಿಯ ನಾಡಿಮಿಡಿತವನ್ನು ಇನ್ನೂ ದಶಕಗಳ ಕಾಲ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.
ಸೂರ್ಯನಿಂದ ದೂರ ಹೋಗುವುದೆಂದರೆ, ಬಿಸಿಲ ತಾಪದಿಂದ, ಬೆಳಕಿನಿಂದ ವಿಮುಖರಾಗುತ್ತ ಹಾರುವುದು, ಜೊತೆಜೊತೆಗೇ ಅಂತರಿಕ್ಷದ ಕೊರೆಯುವ ಚಳಿಯ ವಾತಾವರಣದಲ್ಲಿ ಉಪಕರಣಗಳು ಕೆಲಸ ಮಾಡಬೇಕು. ವಾಯೇಜರ್ ಗೆ ಶಕ್ತಿಯ ಮೂಲ ವಿಕಿರಣವಸ್ತು ಪ್ಲುಟೋನಿಯಂ. ಪ್ರತಿ 87 ವರ್ಷಕ್ಕೆ ಅರ್ಧದಷ್ಟಾಗುವ ಪ್ಲುಟೋನಿಯಂ-238. ಅದು ಕರಗುತ್ತಾ ಬಂದಂತೆ ನೌಕೆಗೆ ದೊರೆಯುವ ವಿದ್ಯುತ್ ಕೂಡಾ ಕಡಿಮೆಯಾಗುತ್ತ ಬರುತ್ತದೆ. ಹೀಗಾಗಿ ಆಗಾಗ ನೌಕೆಯ ಕೆಲವು ಉಪಕರಣಗಳಿಗೆ ವಿಶ್ರಾಮ ನೀಡಲೇಬೇಕಾಗುತ್ತದೆ. 17 ವರ್ಷಗಳ ಹಿಂದೆಯೇ ಬಣ್ಣದ ಚಿತ್ರಗಳನ್ನು ದಾಖಲಿಸುವ ಸ್ಪೆಕ್ಟ್ರೋಮೀಟರಿನ ಸುತ್ತಲ ಬಿಸಿಮಾಡುವ ಉಪಕರಣಗಳನ್ನು ಸಂದೇಶ ನೀಡಿ ಆರಿಸಲಾಗಿತ್ತು. -35 ಡಿಗ್ರಿ ಸೆಲ್ಶಿಯಸ್ ತಡೆದುಕೊಳ್ಳಬಹುದೆಂದುಕೊಂಡ ವಿಜ್ಞಾನಿಗಳ ಅಂದಾಜನ್ನು ಮೀರಿ ವಾಯೇಜರ್ -56 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲೂ ಕೆಲಸ ಮಾಡುತ್ತಲೇ ಇದೆ.
ವಾಯೇಜರ್ ಹಾರಾಟಕ್ಕೆ ಕಳೆದ ಕೆಲವು ವರ್ಷಗಳಿಂದ ಎಲ್ಲಿಲ್ಲದ ಪ್ರಾಮುಖ್ಯತೆ ದೊರೆಯುತ್ತಿದೆ. ಈ ಜೋಡಿ ನೌಕೆಗಳಿಂದ ಬರುವ ಸಂದೇಶಗಳು ಮಾನವನಿಗೆ ಅತ್ಯಮೂಲ್ಯವೆಂದು ಭಾವಿಸಲಾಗುತ್ತಿದೆ. ಬಾನವಿಸ್ತಾರದಲ್ಲಿ ಹಾರುತ್ತಲೇ ಮನುಜನ ಜ್ಞಾನದ ಕ್ಷಿತಿಜವನ್ನೂ ವಾಯೇಜರ್ ಜೋಡಿ ವಿಸ್ತರಿಸುತ್ತಿವೆ.
* ಗುರುತ್ವವೇ ಕವಣೆಗೋಲು
ನಾವು ಭೂಮಿಗೆ, ಭೂಮಿ ಸೂರ್ಯನಿಗೆ, ಸೂರ್ಯ ಕ್ಷೀರಪಥ ಎಂಬ ಗೆಲಾಕ್ಸಿಗೆ ಗುರುತ್ವಾಕರ್ಷಣೆಯ ಮೂಲಕ ಬಂಧಿತರಾಗಿದ್ದೇವಷ್ಟೆ? ಇದೇ ಗುರುತ್ವವನ್ನು ಚಿಮ್ಮುಕವಣೆಯಂತೆ ಬಳಸಿಕೊಂಡು ಬಾನನೌಕೆಗಳ ಹಾರಾಟದ ಸಮಯ ಹಾಗೂ ಇಂಧನದ ಉಳಿತಾಯ ಮಾಡುವ ತಂತ್ರವೊಂದನ್ನು ಖಗೋಳಶಾಸ್ತ್ರಜ್ಞರು ರೂಢಿಸಿಕೊಂಡಿದ್ದಾರೆ.
ಸೂರ್ಯನ ಸಮೀಪವಿರುವ ಅಥವಾ ಭೂಮಿಯಿಂದ ಸೂರ್ಯನ ಕಡೆ ಇರುವ ಗ್ರಹಗಳತ್ತ ನೌಕೆಯೊಂದು ಹಾರುವುದಾದರೆ, ಅದರ ವೇಗ ಹೆಚ್ಚುತ್ತದೆ, ಸೂರ್ಯನ ಗುರುತ್ವವನ್ನು ಮೀರಿ ದೂರ ಹಾರುವುದಾದಲ್ಲಿ ಅದರ ವೇಗಕ್ಕೆ ಬಲ ಹೆಚ್ಚು ಬೇಕಾಗುತ್ತದೆ. ಹೊರಗ್ರಹಗಳಿಗೆ ಹಾರುವ ನೌಕೆ ಉದಾಹರಣೆಗೆ ಗುರುಗ್ರಹದ ಸಮೀಪ ಸಾಗಿತು ಎಂದಿಟ್ಟುಕೊಳ್ಳಿ, ಆಗ ಗುರುವಿನ ಗುರುತ್ವದ ಎಳೆತ ನೌಕೆಯ ವೇಗವನ್ನು ಅಧಿಕಗೊಳಿಸುತ್ತದೆ. ಅಂತೆಯೇ ವೇಗವಾಗಿ ಸೂರ್ಯನನ್ನು ಸುತ್ತುತ್ತಿರುವ ಗುರುವಿನ ಆವೇಗ ತನ್ನೊಂದಿಗೆ ನೌಕೆಯನ್ನೂ ಎಳೆದು ಬಿಸಾಕುತ್ತದೆ. ಅಲ್ಲಿಂದ ಚಿಮ್ಮಿದ ನೌಕೆ ಮುಂದೆ ಯುರೇನಸ್, ಆನಂತರ ನೆಪ್ಚೂನಿನ ಕಕ್ಷೆಗಳಲ್ಲೂ ಈ ರೀತಿಯಾಗಿ ಹಾರಿ ತನ್ನ ವೇಗವರ್ಧನೆ ಮಾಡಿಕೊಳ್ಳಬಹುದು. ಆದರೆ ನೌಕೆಯ ಉಡ್ಡಯನದ ಸಮಯ, ಅದರ ವೇಗ, ಗ್ರಹಗಳು ಹಾರುವ ದಿಕ್ಕು ಮತ್ತವುಗಳ ವೇಗ ಇವೆಲ್ಲವೂ ಪರಿಗಣಿತವಾಗುತ್ತವೆ. ಸ್ವಲ್ಪ ಅಜಾಗರೂಕತೆಯಾದರೂ ನೌಕೆ ಉಪಗ್ರಹದ ಮೇಲ್ಮೈಯನ್ನು ಅಪ್ಪಳಿಸಬಹುದು.
ವಾಯೇಜರ್ ಮತ್ತು ನಾವು
ವಾಯೇಜರುಗಳು ತಮ್ಮ ಪಯಣವನ್ನು ಆರಂಭಿಸಿದಾಗ ಈಗಿನ ತರುಣರಲ್ಲಿ ಬಹಳಷ್ಟು ಜನರು ಹುಟ್ಟಿಯೇ ಇರಲಿಲ್ಲ, ಕೆಲವರು ಇನ್ನೂ ಚಿಕ್ಕವರಾಗಿದ್ದರು. ಆದರೆ ಎಡ್‍ವರ್ಡ್ ಸ್ಟೋನ್ ಎಂಬ ತಂತ್ರಜ್ಞ ವಾಯೇಜರ್ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವನು ಇಂದು ಎಪ್ಪತ್ತಾರು ವರ್ಷದ (ಆದರೆ ಇನ್ನೂ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾಪಕರಾಗಿ ದುಡಿಯುವ) ಮುದುಕ. ಆತ ‘ವಾಯೇಜರ್ ಗಳಿಂದಾಗಿಯೇ ಸೌರಮಂಡಲದ ನಮ್ಮ ಜ್ಞಾನ ಇನ್ನೂ ಹೆಚ್ಚಾಗಿದೆ’ ಎಂದು ಹೆಮ್ಮೆ ಪಡುತ್ತ ಸೂರ್ಯಗೋಲವನ್ನು ದಾಟಿ ಆಚಿನ ಲೋಕದ ಬಗ್ಗೆ ವಾಯೇಜರ್ ಕಣ್ಣು ದಾಖಲಿಸುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಶನಿಗ್ರಹದ ಸಮೀಪದಿಂದ ಶನಿಯ ಉಂಗುರದಲ್ಲಿರುವ ತಿರುವನ್ನು ವಾಯೇಜರ್ ಬಹಿರಂಗಗೊಳಿಸಿದಾಗ ಉಂಟಾದ ಸಂತೋಷವನ್ನು ಎಡ್ ಇಂದಿಗೂ ನೆನೆಯುತ್ತಾರೆ.
ನೂರಾರು ಚಿಗುರು ಮೀಸೆಯ ಯುವಕರೂ ವಾಯೇಜರಿನ ಅನ್ವೇಷಣೆಗಳ ಬಗ್ಗೆ ಬೆರಗು ಪಟ್ಟಿದ್ದಾರೆ. ಹೀಗೆ ವಯಸ್ಸಿನ ಬೇಧವಿಲ್ಲದೆ ವಾಯೇಜರ್ ಎಲ್ಲರಿಗೂ ಅರಿವಿನ ಫಲ ಹಂಚುತ್ತಿದೆ.
ವಾಯೇಜರ್ ಭೂಮಿಯಲ್ಲಿ
ಅದೊಂದು ಅತಿ ಸಾಮಾನ್ಯದ ಕೊಠಡಿ, ಅಲ್ಲಿಮೂಲೆಯಲ್ಲಿ ಓಬೀರಾಯನ ಕಾಲದ ಕಂಪ್ಯೂಟರ್. ಅಲ್ಲೆರಡು ಫಲಕಗಳು, ’ಮಿಶನ್ ಕಂಟ್ರೋಲರ್À’ ಹಾಗೂ ‘ವಾಯೇಜರಿನ ಪ್ರಮುಖ ಯಂತ್ರಾಂಶಗಳು, ದಯವಿಟ್ಟು ಮುಟ್ಟಬೇಡಿ’
ವಾಯೇಜರ್ ಯೋಜನೆಗೆಂದು ಬಳಸಲಾಗುತ್ತಿರುವ ಹೆಚ್ಚಿನ ತಂತ್ರಾಂಶಗಳನ್ನು ಬದಲಿಸಲಾಗಿದೆ, ಆದರೆ ಕೆಲವು ಯಂತ್ರಭಾಗಗಳು ಇನ್ನೂ ಹಾಗೇ ಇವೆ. ಹಾರ್ಡ್‍ವೇರ್ ಭಾಗಗಳು ಶಿಥಿಲಗೊಳ್ಳುತ್ತಿವೆ. ಇಂದಿನ ಬಳಸಿಬಿಸಾಕುವ ತಂತ್ರಜ್ಞಾನ ಪೃವೃತ್ತಿಯ ನಡುವೆಯೂ ಕಳೆದ 35 ವರ್ಷಗಳಿಂದ ಒಂದೆಡೆ ಕೂತು ಕಾರ್ಯನಿರ್ವಹಿಸುತ್ತಿರುವ ಈ ಯಂತ್ರೋಪಕರಣಗಳು…ಕಾಲಯಂತ್ರಗಳೂ ಆಗಿವೆ.
20 ಅರೆಕಾಲಿಕ ವಿಜ್ಞಾನಿಗಳು ಪಾಳಿಯ ಮೇಲೆ ಕೆಲಸ ಮಾಡುತ್ತ ಬಂದ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಣೆ ನಡೆಸುತ್ತಾರೆ. ವಾಯೇಜರ್1 ಕಳಿಸಿದ ಸಂದೇಶ ಇಲ್ಲಿಗೆ ತಲುಪಲು 17 ಗಂಟೆಗಳು ಬೇಕು. ಅಂಕಿಅಂಶಗಳನ್ನು ಸಂಸ್ಕರಿಸಿ ಅರ್ಥಪೂರ್ಣ ಮಾಹಿತಿಗಳನ್ನಾಗಿಸಲು ತಿಂಗಳುಗಟ್ಟಲೆ ಕಾಲ ಹಿಡಿಯುತ್ತದೆ.
ಮಂದನೀಲಿ ಬಣ್ಣದ ಭೂಮಿ
1990ರಲ್ಲಿ ವಾಯೇಜರ್ 1 ಅರವತ್ತು ದಶಕೋಟಿ ಕಿಮೀ ದೂರದಿಂದ ಮಂದನೀಲಿ ಬಣ್ಣದ ಭೂಮಿಯ ಚಿತ್ರವನ್ನು ತೆಗೆದು ಭೂಮಿಗೆ ರವಾನಿಸಿತು. ಅದು ಪ್ರಸಿದ್ಧ ವೈಜ್ಞಾನಿಕ ಬರಹಗಾರ ಕಾರ್ಲ್ ಸಾಗನ್ ಅವರ ವಿನಂತಿಯ ಮೇರೆಗೆ ತೆಗೆದ ಚಿತ್ರ. ಅಂದು ಮುಂದೆ ನೆಟ್ಟಿದ್ದ ವಾಯೇಜರಿನ ಕ್ಯಾಮೆರಾ ಕಣ್ಣನ್ನು ತಿರುಗಿಸಿ ಅನಂತ ವಿಸ್ತಾರದ ಹಿನ್ನೆಲೆಯಲ್ಲಿ ಭೂಗ್ರಹದ ಚಿತ್ರವನ್ನು ತೆಗೆಯುವಂತೆ ನಾಸಾ ಆದೇಶಿಸಿತು. ಸಾಗನ್ನರ ಮುಂದಿನ ಪುಸ್ತಕಕ್ಕೆ ನೀಲಿ ಚುಕ್ಕೆಯ ಆ ಚಿತ್ರ ಮುಖಪುಟ ಚಿತ್ರವಾಗಿ ರಾರಾಜಿಸಿದೆ. ಸಾಗನ್ ಅವರಿಂದ ಬಂದ ಮನವಿಯನ್ನು ವಿಜ್ಞಾನಿಗಳು ಅಂಜುತ್ತಲೇ ಸ್ವೀಕರಿಸಿದರು, ಏಕೆಂದರೆ, ಕ್ಯಾಮೆರಾವನ್ನು ಸೂರ್ಯನತ್ತ ತಿರುಗಿಸುವುದೆಂದರೆ ಸೌರತಾಪದ ಅಪಾಯವನ್ನು ಎದುರಿಸಿದಂತೆಯೇ. ಮೊದಲು ಭೂಹೊರಗ್ರಹಗಳ ನೋಟವನ್ನು ದಾಖಲಿಸಿ, ಆನಂತರ ಭೂಮಿಯ ಚಿತ್ರ ತೆಗೆಯಲಾಯಿತು.
ಸರೋಜಾ ಪ್ರಕಾಶ
- Advertisement -
- Advertisement -
- Advertisement -
- Advertisement -