ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳ ಜ್ಞಾನ ವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ಅಕ್ಷರ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಸಂಯೋಜಕ ಕೆ.ವಿ.ಮಂಜುನಾಥ್ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಡ್ಲಚಿಂತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುದವಾರ ಅಕ್ಷರಾ ಫೌಂಡೇಶನ್ ಹಾಗೂ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗು ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.
ಗಣಿತದಲ್ಲಿ ಯಶಸ್ವಿಯಾದರೆ ಜೀವನದಲ್ಲಿ ಯಶಸ್ವಿಯಾದಂತೆ, ನಿತ್ಯ ಜೀವನ ಆರಂಭವಾಗುವುದೇ ಲೆಕ್ಕಾಚಾರದ ಮೂಲಕ ಹಾಗಾಗಿ ಗಣಿತ ಕಬ್ಬಿಣದ ಕಡಲೆಕಾಯಿ ಎಂಬ ಭಯ ಹೋಗಲಾಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಸಾಲೆಗಳ ೪ ಮತ್ತು ೫, ೬ ನೇ ತರಗತಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಇದಾಗಿದೆ ಎಂದರು.
ಮಕ್ಕಳಿಗೆ ಕ್ಲಿಷ್ಟವೆನಿಸುವ ವಿಷಯಗಳನ್ನು ಸರಳವಾಗಿ ಇಷ್ಟವಾಗುವಂತೆ ಕಲಿಸುವ ಹಲವಾರು ವಿಧಾನಗಳಿವೆ. ಅವುಗಳನ್ನು ಅರಿತವರಿಂದ ಮಕ್ಕಳಿಗೆ ಆಡುತ್ತಾ ಕಲಿಯುವಂತೆ ಕಲಿಸಬಹುದಾಗಿದೆ. ಗ್ರಾಮ ಪಂಚಾಯಿತಿಯ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳನ್ನು ಒಗ್ಗೂಡಿಸಿ ಕಲಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯಿಂದ ಬಹುಮಾನ ವಿತರಿಸಿದರು. ಅಕ್ಷರಾ ಫೌಂಡೇಶನ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು.
ಗ್ರಾ.ಪಂ ಅಧ್ಯಕ್ಷ ಟಿ.ಶ್ರೀನಿವಾಸ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗೌಸ್ಪೀರ್, ಮುಖ್ಯಶಿಕ್ಷಕ ಆದಿನಾರಾಯಣಪ್ಪ, ಶಿಕ್ಷಕ ಬಿ,ಆರ್.ನಾರಾಯಣಸ್ವಾಮಿ, ಕರವಸೂಲಿಗಾರ ಈಶ್ವರರೆಡ್ಡಿ, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -