Sidlaghatta : ಸಮಾಜಸೇವಕರಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಉಳಿಗಾಲವಿಲ್ಲ. ಅದರಲ್ಲೂ ಡೋಂಗಿ ಸಮಾಜಸೇವಕರಿಗೆ ಇನ್ನೂ ಉಳಿಗಾಲವಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎನ್.ವಿಜಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿಡ್ಲಘಟ್ಟಕ್ಕೆ ಹಣದ ಥೈಲಿ ಹಿಡಿದು ಬಂದು ಸಮಾಜ ಸೇವೆ ಎಂಬ ಮುಖವಾಡ ತೊಟ್ಟಂತಹ ವೀರ್ ಬಹಾದ್ದೂರ್ ಹುಸೇನ್, ಶಿವಕುಮಾರಗೌಡ ಮುಂತಾದವರು ಇತಿಹಾಸ ಸೇರಿದ್ದಾರೆ. ಮುಂದೆಯೂ ಅದೇ ಇತಿಹಾಸ ಮರುಕಳಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯು ಕಳೆದ ಚುನಾವಣೆಯಲ್ಲಿ ಎಷ್ಟು ಮತ ಗಳಿಸಿದ್ದರು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಕ್ಷೇತ್ರದಲ್ಲಿ ರಾಜಕೀಯ ಮಾಡಲು ಬಂದಿಲ್ಲ, ಕೇವಲ ಸಮಾಜ ಸೇವೆಗೆಂದು ಬಂದಿರುವುದು ಎಂಬುದಾಗಿ ಹೇಳಿದ ರಾಜೀವ್ ಗೌಡ ಅವರು ಕೊಟ್ಟ ಆಶ್ವಾಸನೆಗಳಲ್ಲಿ ಆಂಬುಲೆನ್ಸ್ ಹೊರತುಪಡಿಸಿದರೆ ಮಿಕ್ಕ ಯಾವುದನ್ನೂ ಈಡೇರಿಸಿಲ್ಲ. ಕೊಳವೆ ಬಾವಿಗಳನ್ನು ಕೊರೆಸುತ್ತೇನೆ, ಹಳ್ಳಿಗೊಂದು ಶುದ್ಧನೀರಿನ ಘಟಕ ಸ್ಥಾಪಿಸುತ್ತೇನೆ, 25 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವೆನೆಂದು ಹೇಳಿದ್ದೆಲ್ಲವೂ ಘೋಷಣೆಗೆ ಸೀಮಿತವಾಗಿದೆ ಎಂದು ಲೇವಡಿ ಮಾಡಿದರು.
ಡಿ.ಕೆ.ಶಿವಕುಮಾರ್ ಹೆಸರು ದುರ್ಬಳಕೆ :
ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರಮ್ ನನಗೆ ನೀಡಿದ್ದಾರೆ ಎನ್ನುತ್ತಾ ರಾಜೀವ್ ಗೌಡ ಜನರ ಕಾಂಗ್ರೆಸ್ ಕಾರ್ಯಕರ್ತರ ದಿಕ್ಕುತಪ್ಪಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಹೆಸರು ಮತ್ತು ಫೋಟೋ ಬ್ಯಾನರ್ ಗಳಲ್ಲಿ ಬಳಸಿಕೊಳ್ಳುತ್ತಾ ಫುಡ್ ಕಿಟ್ ಕೊಡುವಾಗ ತಮ್ಮ ಭಾವಚಿತ್ರದ ಕಾರ್ಡ್ ಮಾತ್ರ ಜನಕ್ಕೆ ನೀಡುವ ಮೂಲಕ ತಮ್ಮ ಇಬ್ಬಂದಿತನವನ್ನು ಪ್ರದರ್ಶಿಸುತ್ತಿದ್ದಾರೆ. ಕೆಪಿಸಿಸಿ ಕೋಆರ್ಡಿನೇಟರ್ ಎಂದು ಹೇಳಿಕೊಳ್ಳುವ ರಾಜೀವ್ ಗೌಡ ಅದರ ದಾಖಲೆ ಪ್ರದರ್ಶಿಸಲಿ ಎಂದರು.
ಕಾಂಗ್ರೆಸ್ ಪಕ್ಷ ಎನ್ನುತ್ತಾರೆ ಆದರೆ ಬಿಜೆಪಿ ಮಾಜಿ ಸಚಿವರ ಆಸ್ತಿ ಪತ್ರಗಳ ದಾಖಲೆಗಳು ಇವರ ಹೆಸರಿನಲ್ಲಿ ಹೇಗೆ ಬಂತು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಈ ಸಂಬಂಧ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆಂದು ಹೇಳಿದರು.
ಶಾಸಕರನ್ನು ನಾವುಗಳು ಇಲ್ಲಿಯೇ ಭೇಟಿ ಮಾಡಬಹುದು, ಆದರೆ ಈಗ ಬಂದಿರುವ ಸಮಾಜ ಸೇವಕರನ್ನು ಬೆಂಗಳೂರಿಗೆ ಹೋಗಿ ಭೇಟಿ ಮಾಡಬೇಕು. ಆಶ್ವಾಸನೆ ನೀಡಿ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಘದವರನ್ನು ಅಲೆದಾಡಿಸುತ್ತಿದ್ದಾರೆ ಎಂದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಅನುಭವಿ ರಾಜಕಾರಣಿ ಶಾಸಕ ವಿ.ಮುನಿಯಪ್ಪ ಅವರೇ ಕಾಂಗ್ರೆಸ್ ನಾಯಕ. ಅವರ ಮಾರ್ಗದರ್ಶನದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮುನ್ನಡೆಯುತ್ತಾರೆ, ಚುನಾವಣೆಯನ್ನು ಎದುರಿಸುತ್ತಾರೆ. ಅವರನ್ನು ಕಡೆಗಣಿಸಿ ಬೆಳೆಯಬಹುದೆಂದು ಭ್ರಮೆಯಲ್ಲಿರುವ ಸಮಾಜ ಸೇವಕರು ಇನ್ನು ಆರು ತಿಂಗಳಲ್ಲಿ ಜಾಗ ಖಾಲಿ ಮಾಡುವರು ಎಂದು ಭವಿಷ್ಯ ನುಡಿದರು.