ಕರ್ನಾಟಕ ಸರ್ಕಾರದ ಸದನ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ಹಾಗೂ ಹರ್ಷ ಹತ್ಯೆಯನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಸದಸ್ಯರು ಸೋಮವಾರ ನಗರದ ಬಸ್ ನಿಲ್ದಾಣ ದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರನ್ನು ಕೊಂದ ಕೊಲೆ ಪಾತಕರನ್ನು ಆದಷ್ಟು ಬೇಗ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಜನವಿರೋಧಿ ಸದನ ವಿರೋಧಿ ಹಾಗೂ ಭಯೋತ್ಪದಕರ ಮತ್ತು ಉಗ್ರರ ಪರವಿರುವ ಕಾಂಗ್ರೆಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಎಸ್ ಡಿ ಪಿ ಐ, ಪಿ ಎಫ್ ಐ ಭಯೋತ್ಪದಕ ಸಂಘಟನೆಗಳು ಕಾಂಗ್ರೆಸ್ ನ ಕೂಸುಗಳು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈ ಸಂಘಟನೆಗಳ ಮೇಲಿದ್ದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿತ್ತು. ತದ ನಂತರ ಈ ಸಂಘಟನೆಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಇನ್ನೂ ಹೆಚ್ಚಾಗಿ ಸಕ್ರಿಯವಾಗಿವೆ. ಈ ಸಂಘಟನೆಗಳನ್ನು ಶಾಶ್ವತವಾಗಿ ನಿರ್ನಾಮ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷವು ಎಸ್ ಡಿ, ಪಿ ಐ ಪಿ ಎಫ್ ಐ ಸಂಘಟನೆಗಳ ಜೊತೆಗೂಡಿ ಶೈಕ್ಷಣಿಕ ವಾತಾವರಣ ಹಾಳುಮಾಡಿದ್ದಲ್ಲದೇ, ಕಾಂಗ್ರೆಸ್ ಪಕ್ಷ ಮತ್ತು ಮುಖಂಡರು ವಿಧಾನಸಭಾ ಕಲಾಪವನ್ನು ವ್ಯರ್ಥವಾಗುವಂತೆ ಮಾಡಿ, ಡಾ.ಬಿ ಆರ್ ಅಂಬೇಡ್ಕರ್ ವಿರೋಧಿ, ವೀರ ಸಾವರ್ಕರ್ ವಿರೋಧಿ, ಹಿಂದೂ ವಿರೋಧಿ, ಜನವಿರೋಧಿ, ಶಿಕ್ಷಣ ದ್ರೋಹಿ ಎಂದು ಸಾಬೀತುಪಡಿಸಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಕೆ.ಎಸ್.ಈಶ್ವರಪ್ಪ ರವರ ಮೇಲೆ ಹಲ್ಲೆಗೆ ಮುಂದಾದ ಕಾಂಗ್ರೆಸ್ ನಾಯಕರು ಕಲಾಪದಲ್ಲಿ ಯಾವುದೇ ವಿಷಯವು ಇಲ್ಲದಿದ್ದರೂ ಗದ್ದಲವೆಬ್ಬಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಮತಬ್ಯಾಂಕ್ ಗಾಗಿ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕ್ರಮಕೈಗೊಳ್ಳಬೇಕಾಗಿ ಕೋರಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲ ರವರಿಗೆ ತಲುಪಿಸಲು ಮನವಿ ಪತ್ರವನ್ನು ಕೊಟ್ಟರು.
ಶಿಡ್ಲಘಟ್ಟ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಮಜಿ ಶಾಸಕ ರಾಜಣ್ಣ, ಬಿಜೆಪಿ ಮುಖಂಡರಾದ ಡಿ.ಎನ್.ದೇವರಾಜ್, ರಾಘವೇಂದ್ರ, ರಮೇಶ್, ಸುಜಾತಮ್ಮ, ಮಂಜುಳಮ್ಮ, ಡಾ.ಸತ್ಯನರಾಯಣರಾವ್, ಮಂಜು, ದಾಮೋದರ್, ಕನಕಪ್ರಸಾದ್, ನಾಗಾರ್ಜುನ್, ರಜನಿಕಾಂತ್, ನಟರಾಜ್ ಹಾಜರಿದ್ದರು.