Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದರು. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮುಷ್ಕರದಲ್ಲಿ ಭಾಗವಹಿಸಿದ್ದ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಖಜಾಂಚಿ ತ್ರಿಮೂರ್ತಿ ಕಡಿಮನಿ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳನ್ನು ತಾಂತ್ರಿಕೇತರ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ನಮ್ಮ ಮೇಲೆ ತಾಂತ್ರಿಕ ಕಾರ್ಯಭಾರ ಹೆಚ್ಚುತ್ತಿದೆ ಎಂದರು.
ಸರ್ಕಾರವು ಕಂದಾಯ ಇಲಾಖೆಯಿಂದ ಅಭಿವೃದ್ದಿಪಡಿಸಿದ ಸಂಯೋಜನೆ, ಇ-ಆಫೀಸ್, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗೈರ್ ಹುಕುಂ, ಪೌತಿ ಆಂದೋಲನ ಆಪ್, ಬೆಳೆ ಕಟಾವು ಮೊಬೈಲ್ ಆಪ್, ನವೋದಯ, ಗರುಡ ಆಪ್, ಭೂಮಿ ಇನ್ನಿತರೆ 21 ಕ್ಕೂ ಹೆಚ್ಚು ತಂತ್ರಾಂಶಗಳಿವೆ.
ಮೊಬೈಲ್ ಮತ್ತು ವೆಬ್ ನ ಈ ಎಲ್ಲ ತಂತ್ರಾಂಶಗಳ ಮೂಲಕವೇ ನಾವು ಕಾರ್ಯನಿರ್ವಹಿಸಬೇಕಿದ್ದು ಇದು ಕಾರ್ಯಭಾರವನ್ನು ಬಹಳಷ್ಟು ಹೆಚ್ಚಿಸಿದೆ. ತಾಂತ್ರಿಕೇತರ ಸಿಬ್ಬಂದಿಯಾದ ನಮ್ಮ ಮೇಲೆ ಮಾನಸಿಕ ಒತ್ತಡ ಹೆಚ್ಚಿ ಇದು ಹತ್ತು ಹಲವು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಗಾಗಿ ನಮಗೂ ತಾಂತ್ರಿಕ ಸಿಬ್ಬಂದಿಗೆ ನೀಡುವಷ್ಟೆ ಸಮಾನ ವೇತನ ಇನ್ನಿತರೆ ಎಲ್ಲ ಸವಲತ್ತುಗಳನ್ನು ಒದಗಿಸಬೇಕು, ಕಾರ್ಯನಿರ್ವಹಿಸುವಾಗ ಜೀವ ಹಾನಿಯಾದಲ್ಲಿ 25 ಲಕ್ಷ ರೂ ಪರಿಹಾರ ಮಂಜೂರು ಮಾಡಬೇಕು. ವಂಶ ವೃಕ್ಷ, ಜಾತಿ ಪ್ರಮಾಣ ಪತ್ರ ನೀಡುವಾಗ ಆಗುವ ದೋಷಗಳಲ್ಲಿ ನಮ್ಮನ್ನು ಹೊಣೆ ಮಾಡುವುದನ್ನು ಬಿಟ್ಟು ತಪ್ಪು ಮಾಹಿತಿ ನೀಡುವ ಅರ್ಜಿದಾರರ ಮೇಲೆ ಕ್ರಮಕೈಗೊಳ್ಳಬೇಕು. ಪದೋನ್ನತಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಿದ ಗ್ರಾಮ ಆಡಳಿತ ಅಧಿಕಾರಿಗಳು ಸಂಜೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎಚ್.ಚೇತನ್ ಕುಮಾರ್, ಗೌರವಾಧ್ಯಕ್ಷ ಎಡ್ವಿನ್ ಲಾರೆನ್ಸ್, ಉಪಾಧ್ಯಕ್ಷ ಎಚ್.ಕೆ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಬಿ.ವೈ.ಸುರೇಶ್, ಖಜಾಂಚಿ ತ್ರಿಮೂರ್ತಿ ಕಡಿಮನಿ, ಸಂಘಟನಾ ಕಾರ್ಯದರ್ಶಿ ವರಲಕ್ಷ್ಮಿ ಸೇರಿದಂತೆ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.